ಗದಗ: ಸಂತೆಯೊಳಗೆ ಅಲ್ಲಲ್ಲಿ ದನಗಳನ್ನು ಕಟ್ಟಿದ ರೀತಿಯಲ್ಲಿ ಅಧಿಕಾರಿಗಳು ಹಿಂದೆ ಇರೋದಲ್ಲ. ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ನನ್ನ ಜೊತೆಗಿರಬೇಕು. ಬೆಳೆ ಹಾನಿ ಕುರಿತು ನಾನಿಲ್ಲಿ ರೈತರ ಸಮಸ್ಯೆ ಆಲಿಸುತ್ತಿದ್ದರೆ, ಅಧಿಕಾರಿಗಳು ಕಿಲೋಮೀಟರ್ ಗಟ್ಟಲೇ ದೂರ ನಿಂತು ದನ ಕಾಯ್ತಾ ಇದ್ದಾರಾ… ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ಕಳೆದ ಮೂರ್‍ನಾಲ್ಕು ದಿನಗಳ ಕಾಲ ಧಾರಾಕಾರವಾಗಿ ಸುರಿದ ಮಳೆಗೆ ಅಪಾರ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿ ಸಮೀಕ್ಷೆಗೆ ಶುಕ್ರವಾರ ತಾಲೂಕಿನ ಹೊಂಬಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷಿ ಅಧಿ ಕಾರಿಗಳು ಸಚಿವರ ಜತೆ ಇರದೇ ಕಾರಿನ ಬಳಿ ಇರುವುದನ್ನು ಕಂಡು ಸಚಿವರು ಚಾಟಿ ಬೀಸಿದರು.
ಸಚಿವ ಸಿ.ಸಿ. ಪಾಟೀಲ ಅವರು ಕೆಂಡಾಮಂಡಲರಾಗುತ್ತಿದ್ದಂತೆ ಸಚಿವರಿದ್ದ ಸ್ಥಳಕ್ಕೆ ಒಡೋಡಿ ಬಂದ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಅವರಿಗೆ ಎಸಿ ರೂಂನಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡುವುದಲ್ಲ. ಸೂಕ್ತ ರೀತಿಯಲ್ಲಿ ನಿಖರವಾಗಿ ಸಮೀಕ್ಷೆ ನಡೆಯಬೇಕು. ಜನರ ನೋವನ್ನು ತಾಳ್ಮೆಯಿಂದ ಕೇಳಬೇಕು. ಆದಷ್ಟು ಬೇಗ ಬೆಳೆ ಹಾನಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಪ್ರವಾಹ ಬಂದಂತಹ ಸಂದರ್ಭದಲ್ಲಿ ಜನರ ಆಕ್ರೋಶವಿರುತ್ತದೆ. ಅಧಿಕಾರದಲ್ಲಿದ್ದವರು, ಅ ಧಿಕಾರಿಗಳು ತಾಳ್ಮೆಯಿಂದ ಜನರ ನೋವನ್ನು ಆಲಿಸಬೇಕಾಗುತ್ತದೆ. ಅಧಿ ಕಾರಿಗಳು ಎಲ್ಲೋ ಕುಳಿತುಕೊಂಡು ಸಮೀಕ್ಷೆ ವರದಿ ನೀಡದೇ, ಹಾನಿ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ವರದಿ ನೀಡಬೇಕೆಂದು ಹೇಳಿದರು.
ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ತ್ವರಿತ ಪರಿಹಾರ ದೊರಕಿಸಲು ಅಧಿ ಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದ ಸಚಿವರು, ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಹತ್ತು ದಿನದೊಳಗಾಗಿ ಪರಿಹಾರ ತಲುಪಿಸಬೇಕೆಂದರು. ಅಧಿಕ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೂಡಲೇ ಸಂತ್ರಸ್ತರಿಗೆ ಆಹಾರ ಧಾನ್ಯ ವಿತರಿಸಲು
ಸೂಚಿಸಲಾಗಿದೆ. ಜಿಲ್ಲೆಯ ನಾಗಾವಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆಯಾದ ವರದಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ.
ಜೊತೆಗೆ ಅಪಾರ ಪ್ರಮಾಣದ ಮನೆಗಳು, ರಸ್ತೆಗಳು ಹಾಗೂ ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಅಧಿಕಾರಿಗಳ ತಂಡ ಹಾನಿ ಪ್ರಮಾಣದ ಸಮೀಕ್ಷೆಯನ್ನು ನಿಖರವಾಗಿ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ದೊರಕಿಸಲು ತಿಳಿಸಲಾಗಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರ ಒದಗಿಸಲು 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಸಂಪುಟ ಸಹೊದ್ಯೋಗಿಗಳು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
ರೈತರ ಜಮೀನುಗಳಿಗೆ ಅಪಾರ ನೀರು ನುಗ್ಗಿ ಹಾನಿಯಾಗಿದ್ದು, ಇದನ್ನು ನರೇಗಾ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಮಳೆ ನಿಂತ ತಕ್ಷಣ ರಸ್ತೆಗಳ ದುರಸ್ತಿಗೆ ಸೂಚಿಸಲಾಗಿದೆ. ಒಟ್ಟಾರೆ ಜಿಲ್ಲೆಯ ಹಾನಿಯಾದ ಬೆಳೆ, ಮನೆ, ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.