ಚಿತ್ರದುರ್ಗ : ಲೈಂಗಿಕ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬದಲಾಯಿಸಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಕೆಪಿಸಿಸಿ ಮಾಧ್ಯಮ ವಕ್ತಾರ ಬಾಲಕೃಷ್ಣಸ್ವಾಮಿ ಯಾದವ್ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ. 2 ರಿಂದ ಸಿಡಿ ಹಗರಣ ಸುತ್ತಾಡುತ್ತಿದೆ. ಆದರೆ ಇನ್ನೂ ಆರೋಪಿಯನ್ನು ಬಂಧಿ ಸಿಲ್ಲ. ಇದನ್ನು ನೋಡಿದರೆ ರಾಜ್ಯ ಬಿಜೆಪಿ ಸರ್ಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಚಾವ್ ಮಾಡಲು ಹೊರಟಂತಿದೆ ಎಂದು ದೂರಿದರು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕಾನೂನುಬದ್ಧವಾಗಿ ತನಿಖೆಯಾಗುತ್ತಿಲ್ಲ. ದೂರುದಾರರ ಮೇಲೆ ಒತ್ತಡ ಹೇರಲಾಗುತ್ತಿದೆ. 24 ಗಂಟೆಯೊಳಗೆ ಎಫ್‌ಐಆರ್ ಹಾಕಿ ದೂರು ದಾಖಲಿಸಬೇಕು. ರಾಜ್ಯ ಮಹಿಳಾ ಆಯೋಗ ಕೂಡ ಯುವತಿಯ ನೆರವಿಗೆ ಬರುತ್ತಿಲ್ಲ.
ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಆಪಾದಿಸಿದರು. ಆರೋಪಿಗೆ ಮಹಿಳಾ ಆಯೋಗದಿಂದ ಒಂದು ನೋಟಿಸ್ ಕೂಡ ನೀಡಿಲ್ಲ. ಇದರ ಹಿಂದೆ ಬಿಜೆಪಿ ಕೈವಾಡವಿದೆ. ಆರೋಪಿಯನ್ನು ಪತ್ತೆ ಹಚ್ಚಲು ಅನೇಕ ಮಾರ್ಗಗಳಿದ್ದರೂ ವಿನಾಕಾರಣ ವಿಳಂಬ ಮಾಡುತ್ತಿರುವುದು ಆರೋಪಿಗೆ ಸಹಾಯವಾಗಲಿದೆ. ಗೃಹ ಇಲಾಖೆ ಕೂಡ ಕಂಡು ಕಾಣದಂತಿರುವುದು ನೋವಿನ ಸಂಗತಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಹಲ್ಲೆಗೆ ಮುಂದಾಗಿರುವುದು ಖಂಡನೀಯ.
ಇಂತಹ ಗೂಂಡಾಗಿರಿಯನ್ನು ನೋಡಿದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ “ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಘೋಷಣೆ ಬಿಜೆಪಿಯವರ ವರ್ತನೆಗೆ ತದ್ವಿರುದ್ಧವಾಗಿದೆ. ತತ್ವ ಸಿದ್ಧಾಂತಗಳು ಆ ಪಕ್ಷದಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ.
ತಮ್ಮ ಪಕ್ಷದವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಚಿವ ಡಾ| ಕೆ. ಸುಧಾಕರ್, ರಾಜ್ಯದ 224 ಶಾಸಕರುಗಳ ಮೇಲೂ ವಿಚಾರಣೆ ನಡೆಸಬೇಕೆಂದಿರುವುದು ಅರ್ಥಹೀನ ಎಂದು ಟೀಕಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್ ಕುಮಾರ್, ಕಾನೂನು ವಿಭಾಗದ ಶಿಕುಮಾರ್, ಮುಖಂಡರಾದ ಎನ್.ಡಿ.ಕುಮಾರ್, ಡಿ.ಎಸ್. ಸುದರ್ಶನ್, ಉಲ್ಲಾಸ್ ಸುದ್ದಿಗೋಷ್ಠಿಯಲ್ಲಿದ್ದರು.