ಹೂವಿನಹಿಪ್ಪರಗಿ: ದೇವರಹಿಪ್ಪರಗಿ ಮತಕ್ಷೇತ್ರದ ಹಲವಾರು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಮೆಲ್ದರ್ಜೆಗೇರಿಸುವ ಮೂಲಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಶರಣ ಸೋಮನಾಳ ಗ್ರಾಮದ ಶರಣ ಶ್ರೀ ಬಸಲಿಂಗಪ್ಪನವರ ದೇವಾಲಯದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಬಸವನಬಾಗೇವಾಡಿ 2021-2022ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ವಿಜಯಪುರ-ಉಕ್ಕಲಿ-ದಿಂಡವಾರ-ಸಾಸನೂರ ರಾಜ್ಯ ಹೆದ್ದಾರಿ ತಾಳಿಕೋಟೆಯಿಂದ ಕಿ.ಮೀ 56.50 ರಿಂದ 62.97ವರೆಗಿನ 6.5 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೆಚ್ಚಿನ ಅಭಿವೃದ್ಧಿಪರ ಯೋಜನೆಗಳ ಕಾಮಗಾರಿ ಅನುಷ್ಠಾನಗೊಳಿಸಿ ನೀರಾವರಿ ಮತ್ತು ಮೂಲ ಸೌಲಭ್ಯ ಒದಗಿಸಲು ಹೆಚ್ಚಿನ ಒತ್ತು ನೀಡಿ ಪೂರ್ಣ ಪ್ರಮಾಣದ ಅಭಿವೃದ್ಧಿ ಹೊಂದಿದ ಕ್ಷೇತ್ರವನ್ನಾಗಿ ಮಾಡಲಾಗುವುದು. ಈ ಹಿಂದೆ ಜಿಲ್ಲಾ ರಸ್ತೆಯಾಗಿದ್ದ ರಸ್ತೆಯನ್ನು ರಾಜ್ಯ ಹೆದ್ದಾರಿ ರಸ್ತೆಯಾಗಿ ಮೆಲ್ದರ್ಜೆಗೇರಿಸಿ ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ವ್ಯಾಪಾರ- ವಹಿವಾಟು ನಡೆಯುವಂತಾಗಿ ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗುವುದು ಎಂದರು.
ಮತಕ್ಷೇತ್ರದಲ್ಲಿಯ ಸಣ್ಣ ಗ್ರಾಮಗಳನ್ನೂ ಕಡೆಗಣಿಸದೇ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಪರ ಕೆಲಸ ಮಾಡಲಾಗಿದೆ. ಈ ಬಾರಿ ಹೆಚ್ಚಿನ ಮಳೆಯಾಗಿ ಅತಿವೃಷ್ಟಿಯಾಗಿದ್ದು ಬೆಳೆ ಮತ್ತು ಮನೆಗಳೂ ಹಾನಿಯಾಗಿ ರೈತ ಮತ್ತು ಜನರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಪ್ರತಿ ಗ್ರಾಮಗಳಿಗೂ ತೆರಳಿ ಸರ್ವೇ ಕಾರ್ಯ ಮಾಡಿ ವರದಿ ಸಲ್ಲಿಸಲು ತಿಳಿಸುವುದಾಗಿ ಹೇಳಿದರು.
ಶಿವಶರಣ ಬಸವಲಿಂಗಪ್ಪನವರ ಮಠದ ಡಾ| ಶಿವಪುತ್ರಪ್ಪ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮತಕ್ಷೇತ್ರದಲ್ಲಿ ಶಾಸಕ ಸೋಮನಗೌಡರು ಮಾತನಾಡುವುದಕ್ಕಿಂತ ಅವರ ಅಭಿವೃದ್ಧಿಪರ ಕೆಲಸ ಕಾರ್ಯ ಮಾಡುತ್ತಿದ್ದಾರೆ ಎಂದರು.
ಲೋಕೋಪಯೋಗಿ ಇಲಾಖೆಯ ಜೆ.ವಿ. ಕಿರೇಸೂರ ಪ್ರಾಸ್ತಾವಿಕ, ಮಹಾದೇವ ಶಾಸ್ತ್ರಿಗಳು ಸಾನ್ನಿಧ್ಯ ವಹಿಸಿ, ಮುಖಂಡ ರಮೇಶ ಮಸಬಿನಾಳ ಮಾತನಾಡಿದರು. ಈ ವೇಳೆ ಬಾಪುಗೌಡ ಧನ್ನೂರ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಗುತ್ತಿಗೆದಾರ ಎ.ಬಿ.ನರಸರಡ್ಡಿ, ಮಂಜುನಾಥ ಹೊಸಗೌಡರ, ಪರಶುರಾಮ ಗಂಜಿಹಾಳ, ಚನಬಸಪ್ಪಗೌಡ ಕಚನೂರ, ಸಂಗನಗೌಡ ಪಾಟೀಲ, ವಿಠ್ಠಲಗೌಡ ಬಿರಾದಾರ, ರಾಮನಗೌಡ ಬಿರಾದಾರ, ಸಂಗನಗೌಡ ಧನ್ನೂರ ಸೇರಿದಂತೆ ಇತರರು ಇದ್ದರು.