ಚಾಮರಾಜನಗರ: ಪಣ್ಯದಹುಂಡಿಯಿಂದ ಹೆಗ್ಗೊಠಾರ ಗ್ರಾಮಕ್ಕೆ ಹೋಗುವ ಮಾರ್ಗ ನಡೆಯುತ್ತಿರುವ ಸಿಮೆಂಟ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ ಕಳಪೆಯಾಗಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಜನ ಹಿತ ಶಕ್ತಿ ಹೋರಾಟ ವೇದಿಕೆ ವತಿಯಿಂದ ತಾಲೂಕಿನ ಪಣ್ಯಡಿ ಗ್ರಾಮದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕ್ರಿಯಾ ಯೋಜನೆಯಂತೆ ಕಾಮಗಾರಿ ನಡೆದಿಲ್ಲ: ಜನ ಹಿತ ಶಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ 3.3 ಕಿಲೋ ಮೀಟರ್‌ಗಳಷ್ಟು ಪಣ್ಯದಹುಂಡಿ ಹಾಗೂ ಹೆಗ್ಗೊಠಾರ ಮಾರ್ಗವಾಗಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಯು ನಡೆಯುತ್ತಿದೆ. ಈ ಕಾಮಗಾರಿಯು ಕ್ರಿಯಾ ಯೋಜನೆಯಂತೆ ನಡೆಯದೆ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ.
ಇದುವರೆಗೂ ಕಾಮಗಾರಿ ನಡೆಯುವ ಸ್ಥಳಕ್ಕೆ ಗುತ್ತಿಗೆದಾರರಾಗಲೀ, ಇಲಾಖೆಯ ಅಧಿಕಾರಿಗಳಾಗಲೀ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು. ನಿರ್ಲಕ್ಷ್ಯ ವಹಿಸಿ ಕಾಮಗಾರಿಯನ್ನು ಹಾಳು ಮಾಡಿದ್ದಾರೆ. ಇದು ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಈ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಇಂತಹ ಕಳಪೆ ಕಾಮಗಾರಿಯ ಕಡೆ, ಗಮನ ಹರಿಸದೇ ಇರುವುದು ಶೋಚನೀಯವಾಗಿದೆ ಎಂದರು.
ಗುತ್ತಿಗೆದಾರನನ್ನು ಬದಲಾವಣೆ ಮಾಡಿ: ಕೂಡಲೇ ಕಳಪೆ ಕಾಮಗಾರಿಗೆ ಕಾರಣವಾಗಿರುವ ಗುತ್ತಿಗೆದಾರನನ್ನು ಬದಲಾವಣೆ ಮಾಡಬೇಕು. ಈತನ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈಗ ನಡೆದಿರುವ ಗುಣಮಟ್ಟವಿಲ್ಲದ ಕಾಮಗಾರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಉತ್ತಮ ಗುಣಮಟ್ಟ ವಿರುವ ಕಾಮಗಾರಿ ನಡೆಸಬೇಕು. ಕಳಪೆ ಕಾಮಗಾರಿ ನಡೆಯಲು ಗುತ್ತಿಗೆದಾರನಿಗೆ ಅವಕಾಶ ನೀಡಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು ಆಗಮಿಸಿ ವೇದಿಕೆಯ ಮನವಿಗೆ ಸ್ಪಂದಿಸಿ, ಕಳಪೆ ಕಾಮಗಾರಿಯನ್ನು ಜೆಸಿಬಿ ಮುಖಾಂತರ ಧ್ವಂಸಗೊಳಿಸಿದರು. ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು. ಬದನಗುಪ್ಪೆ ಮಹೇಶ್, ಪಣ್ಯದಹುಂಡಿ ಸತೀಶ್, ರಾಜು, ಯಜಮಾನ್ ಶಿವಣ್ಣ, ಶಿವಸ್ವಾಮಿ, ಮುತ್ತಿಗೆ ದೊರೆಸ್ವಾಮಿ, ಮಧು, ದೇವರಾಜು, ಸಂತೋಷ್, ಬಣ್ಣಾರಿ ಮಹೇಶ್, ಶಿವರಾಜು, ಚಂದ್ರಕುಮಾರ್, ಮುತ್ತಿಗೆ ಮೂರ್ತಿ ಇನ್ನಿತರರು ಭಾಗವಹಿಸಿದ್ದರು.