ಮುಂಬೈ: ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಜತೆಗಿನ ಗಡಿ ವಿವಾದದ ನಿರ್ಣಯವನ್ನು ಕರ್ನಾಟಕ ವಿಧಾನಸಭೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಕರ್ನಾಟಕದ “ಮರಾಠಿ ವಿರೋಧಿ” ನಿಲುವನ್ನು ಖಂಡಿಸಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದು, ಅದು ಕೂಡಾ ಸರ್ವಾನುಮತದಿಂದ ಅಂಗೀಕಾರಗೊಂಡಿದೆ.
ಇದನ್ನೂ ಓದಿ:ʼಪಠಾಣ್ʼಗೆ ಟಕ್ಕರ್ ಕೊಡುತ್ತಾʼ ಗಾಂಧಿ-ಗೋಡ್ಸೆ ಏಕ್ ಯುದ್ಧ್ʼ: ಮೋಷನ್ ರಿಲೀಸ್
ಎರಡು ರಾಜ್ಯಗಳ ನಡುವೆ ಗಡಿ ವಿವಾದ ತಲೆದೋರಿದ್ದು, ಉಭಯ ರಾಜ್ಯಗಳಲ್ಲೂ ಬಿಜೆಪಿ ಆಡಳಿತ ನಡೆಸುತ್ತಿದೆ. ಮುಂದಿನ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಡಿ ವಿಚಾರದಲ್ಲಿ ಮಧ್ಯಪ್ರವೇಶಿಸಿದ ನಡುವೆಯೂ ಮಹಾರಾಷ್ಟ್ರ ಸರ್ಕಾರದ ನಿರ್ಣಯದಿಂದಾಗಿ ಬಿಕ್ಕಟ್ಟು ಇನ್ನಷ್ಟು ಮುಂದುವರಿಯುವಂತಾಗಿದೆ ಎಂದು ವರದಿ ತಿಳಿಸಿದೆ.
ಮರಾಠಿ ಭಾಷೆ ಮಾತನಾಡುವ 865 ಗ್ರಾಮಗಳು ಹಾಗೂ ಈ ಗ್ರಾಮಗಳ ಎಲ್ಲಾ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿಯೂ ಮಹಾರಾಷ್ಟ್ರ ಸರ್ಕಾರ ಕಾನೂನು ಸಮರಕ್ಕೆ ಸಿದ್ಧವಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ, ಭಾಲ್ಕಿ ಸೇರಿದಂತೆ 865 ಗ್ರಾಮಗಳ ಪ್ರತಿ ಒಂದು ಇಂಚು ಜಾಗವೂ ಮಹಾರಾಷ್ಟ್ರದ ಭಾಗವಾಗಿರಲಿದೆ ಎಂದು ನಿರ್ಣಯದಲ್ಲಿ ಮಹಾರಾಷ್ಟ್ರ ಸರ್ಕಾರ ಅಂಗೀಕರಿಸುವ ಮೂಲಕ ಗಡಿ ವಿವಾದದ ಕಿಚ್ಚನ್ನು ಮುಂದುವರಿಸಿದೆ ಎಂದು ವರದಿ ಹೇಳಿದೆ.