ಧಾರವಾಡ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕವಿವಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ-ಕರ್ನಾಟಕದ ಕೊಡುಗೆ’ ಕುರಿತು ಹಮ್ಮಿಕೊಂಡಿದ್ದ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಸಮ್ಮೇಳನ ಶನಿವಾರ ಸಮಾರೋಪಗೊಂಡಿತು.
ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ವಿಜ್ಞಾನಿಗಳು, ಸಂಶೋಧಕರು ಹಾಗೂ ವಿವಿ ಪ್ರಾಧ್ಯಾಪಕರು ಕನ್ನಡದಲ್ಲಿ ತಮ್ಮ ಸಂಶೋಧನಾ ಲೇಖನ ಅಥವಾ ಪುಸ್ತಕ ಪ್ರಕಟಿಸಿದರೆ ಈ ಸಮ್ಮೇಳನ ಮಾಡಿದ್ದು ಸಾರ್ಥಕವಾಗುತ್ತದೆ. ಕನ್ನಡದಲ್ಲಿ ಬರೆದಾಗ ಮಾತ್ರವೇ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಪ್ರಚುರಪಡಿಸಲು ಸಾಧ್ಯವಿದೆ ಎಂದರು.
ಕನ್ನಡದಲ್ಲಿ ಸಂಶೋಧನಾ ಲೇಖನಗಳು ಮತ್ತು ಪ್ರಬಂಧಗಳು ಪ್ರಕಟಣೆಯಾಗಬೇಕು. ವಿಜ್ಞಾನಿಗಳು ತಮ್ಮ ಸಂಶೋಧನೆಯ ಸಾರವನ್ನು ಕನ್ನಡದಲ್ಲಿಯೇ ಪ್ರಕಟಿಸಿದಾಗ ಮಾತ್ರ ಜನಸಾಮಾನ್ಯರಿಗೆ ಅರ್ಥವಾಗಲು ಸಾಧ್ಯ. ವಿಜ್ಞಾನ ವಿಷಯದ ಪ್ರಾಧ್ಯಾಪಕರು ಈ ಕುರಿತು ಅವಲೋಕಿಸಬೇಕು. ವಿಜ್ಞಾನ ಸಾಹಿತಿಗಳು ಕನ್ನಡದಲ್ಲಿ ಹೆಚ್ಚು ಕವನ, ಕಥೆ, ನಾಟಕಗಳನ್ನು ರಚಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಆಸಕ್ತಿ ಮೂಡಿಸಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ, ಪದ್ಮಶ್ರೀ ಡಾ| ಎಸ್.ಕೆ. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಲೇಖಕ ಸಿ.ಬಿ. ಪಾಟೀಲ ರಚಿಸಿದ 150 ಸಿಂಪಲ್ ಸೈನ್ಸ್ ಎಕ್ಸ್‌ಪರಿಮೆಂಟ್ಸ್ ಪುಸ್ತಕ ಹಾಗೂ ಇದರ ಜೊತೆಗೆ ಸಮ್ಮೇಳನ ಕುರಿತ ಕವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ವಿದ್ಯಾ ಸಮಾಚಾರ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಕಾರ್ಯದರ್ಶಿ ಎ.ಎಂ. ರಮೇಶ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ| ಕೆ.ಬಿ. ಗುಡಸಿ, ಡಾ| ಸ.ರ. ಸುದರ್ಶನ ಇದ್ದರು.
ಸ್ಪರ್ಧಾ ವಿಜೇತರಿವರು
ಕವಿಗೋಷ್ಠಿಯಲ್ಲಿ ದಿವ್ಯ ಆಚಾರಿ ಪ್ರಥಮ, ಬಸವರಾಜ ಇಂಗಳಗಿ ದ್ವಿತೀಯ, ಡಾ| ಲಿಂಗರಾಜ ರಾಮಾಪುರ ತೃತೀಯ ಸ್ಥಾನ ಪಡೆದರು. ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಭೌತಶಾಸ್ತ್ರ ಹಾಗೂ ರಾಸಾಯನ ಶಾಸ್ತ್ರದಲ್ಲಿ ಸಾತ್ವಿಕ್ ಜಾಧವ ಪ್ರಥಮ, ಡಾ| ಯು. ಶಾನವಾಡ ದ್ವಿತೀಯ, ದಿವ್ಯ ಆಚಾರಿ ಹಾಗೂ ವಿಜಯ ಕಟ್ಟಿ ತೃತೀಯ ಸ್ಥಾನ, ಸಚಿನ್ ಜಿ.ಆರ್, ಮುರುಗೇಶ ಎಂ.ಡಿ. ಸಮಾಧಾನಕರ ಬಹುಮಾನ ಪಡೆದರು. ಭಿತ್ತಿಚಿತ್ರ ಜೀವಶಾಸ್ತ್ರದಲ್ಲಿ ಮೋಹನ ಕುಮಾರ್ ಪ್ರಥಮ, ಉಮರ್ ಫಾರುಕ್ ಹಾಗೂ ಸ್ಮಿತಾ ಹೆಗ್ಡೆ ದ್ವಿತೀಯ, ಬಿ.ಎನ್. ನರೇಂದ್ರ ಬಾಬು ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಪ್ರಥಮ 10,000, ದ್ವಿತೀಯ 7,500 ಹಾಗೂ ತೃತೀಯ 5,000 ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.