Advertisement

ಮನೆ ಮನೆ ದಸರಾ ಆಚರಣೆಗೆ ತೀರ್ಮಾನ

09:34 PM Aug 29, 2019 | Lakshmi GovindaRaj |

ಮೈಸೂರು: ಈ ಬಾರಿಯ ದಸರಾ ಮಹೋತ್ಸವನ್ನು ವಿಶೇಷವಾಗಿ ಆಚರಿಸುವ ಉದ್ದೇಶವಿದ್ದು, ಮನೆ ಮನೆ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ತಾಲೂಕು ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಗ್ರಾಮೀಣ ದಸರಾ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಸರಾ ಸಂಬಂಧ ಜಿಲ್ಲಾ ಪಂಚಾಯತಿ ಸದಸ್ಯರೊಂದಿಗೆ ಏರ್ಪಡಿಸಿದ್ದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು. ಒಂದು ವಾರದಲ್ಲಿ ಸುರಿದ ಮಳೆಗೆ ಇದೇ ಮೊದಲ ಬಾರಿಗೆ ನಾಡಿನ ಎಲ್ಲಾ ಜಲಾಶಯಗಳು ತುಂಬಿವೆ. ಅಲ್ಲಲ್ಲಿ ಸಾಕಷ್ಟು ಹಾನಿಯಾಗಿದೆ.

ಈ ಬಾರಿ ನೀರಿಗೆ ಯಾವುದೇ ಕೊರತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಐತಿಹಾಸಿಕ ದಸರಾ ಮಹೋತ್ಸವದ ಯಶಸ್ಸಿಗೆ ಎಲ್ಲರೂ ನಮ್ಮಂದಿಗೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು. ಎಲ್ಲರೂ ಸೇರಿ ಸಂಭ್ರಮದಿಂದ ದಸರಾದಲ್ಲಿ ಭಾಗಿಯಾಗೋಣ. ಈ ವರ್ಷ ಗ್ರಾಮೀಣ ದಸರಾ, ಮನೆ ಮನೆ ದಸರಾ ಹಾಗೂ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಜಿಪಂ ಸದಸ್ಯ ವೆಂಕಟೇಶ್‌ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈಚೆಗೆ ತಾಲೂಕು ಮಟ್ಟದಲ್ಲಿ ನಡೆಯುತ್ತಿದ್ದ ಗ್ರಾಮೀಣ ದಸರಾವನ್ನು ನಿರ್ಲಕ್ಷಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಾರಿಯ ದಸರಾದಲ್ಲಿ ಜಿಪಂ ಎಲ್ಲಾ ಸದಸ್ಯರು ಹಾಗೂ ಮಹಾ ನಗರಪಾಲಿಕೆ ಸದಸ್ಯರನ್ನೂ ಉಪ ಸಮಿತಿಗಳಲ್ಲಿ ನೇಮಿಸಲಾಗುತ್ತಿದೆ.

ಜೊತೆಗೆ ದಸರಾ ಕಾರ್ಯಕ್ರಮ ವೀಕ್ಷಿಸಿಲು ಪ್ರತ್ಯೇಕ ವ್ಯವಸ್ಥೆಯನ್ನು ಜಿಪಂ ಮತ್ತು ಪಾಲಿಕೆ ಸದಸ್ಯರಿಗೆ ಕಲ್ಪಿಸಲಾಗುವುದು. ಅವರ ಜಾಗದಲ್ಲಿ ಹೆಸರಿನ ಬೋರ್ಡ್‌ ಹಾಕಲಾಗುವುದು. ಸಣ್ಣಪುಟ್ಟ ವಿಚಾರಗಳಿಗೆ ಯಾರೂ ಬೇಸರ ಮಾಡಿಕೊಳ್ಳಬಾರದು. ಎಲ್ಲರೂ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಮತ್ತೂಬ್ಬ ಸದಸ್ಯರಾದ ಮಹದೇವು ಮಾತನಾಡಿ, ದಸರಾ ಬಂದಿದೆ. ಆದರೆ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು. ಸದಸ್ಯ ಅಚ್ಯುತಾನಂದ, ದಸರಾ ವೇಳೆ ನಡೆಯುವ ಕೆಲಸಗಳು ಕಳಪೆಯಿಂದ ಕೂಡಿರುತ್ತವೆ. ಕೆಲಸಗಳು ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.

ಆಹ್ವಾನ ಪತ್ರಿಕೆ: ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪ್ರತಿವರ್ಷ ಆಹ್ವಾನ ಪತ್ರಿಕೆಯ ಮುದ್ರಣ ತಡವಾಗುತ್ತಿದೆ. ಇದರಿಂದ ಆಹ್ವಾನಿತರಿಗೆ ಪತ್ರಿಕೆಗಳು ತಡವಾಗಿ ಸೇರುತ್ತಿದ್ದು, ಸಮಸ್ಯೆಯಾಗುತ್ತಿದೆ. ಪ್ರವಾಸಿಗರಿಗಾಗಿ ನೀಡುತ್ತಿದ್ದ ಗೋಲ್ಡ್‌ ಕಾರ್ಡ್‌ನ್ನು ಮತ್ತೆ ನೀಡುವ ವ್ಯವಸ್ಥೆ ಮಾಡಿ. ಆಹಾರ ಮೇಳ ಏರ್ಪಡಿಸುವಾಗ ಎಲ್ಲರಿಗೂ ಅವಕಾಶ ನೀಡಿ ಎಂದು ಸಲಹೆ ನೀಡಿದರು.

ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ನಮ್ಮ ತಾಲೂಕಿನಲ್ಲಿ ಹೆಚ್ಚು ಆದಿವಾಸಿ ಸಮುದಾಯದವರಿದ್ದು, ಅವರಿಗೂ ದಸರಾದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿದರು. ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್‌. ನಾಗೇಂದ್ರ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ತಲಾ ಜಿಪಂ ವ್ಯಾಪ್ತಿಗೆ 1 ಲಕ್ಷ ರೂ.  ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ದಸರಾ ಆಚರಣೆಗೆ ಜಿಲ್ಲಾ ಪಂಚಾಯಿತಿಗೆ 50 ಲಕ್ಷ ರೂ. ಅನುದಾನ ಅಗತ್ಯವಿದೆ ಎಂದು ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ ಮನವಿ ಮಾಡಿದರು. ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿ, ಒಂದೊಂದು ಜಿಲ್ಲಾ ಪಂಚಾಯಿತಿ ಸದಸ್ಯರ ವ್ಯಾಪ್ತಿಗೆ ಒಂದು ಲಕ್ಷ ರೂ. ನೀಲಡಲಾಗುವುದು ಎಂದು ಘೋಷಣೆ ಮಾಡಿದರು.

ಸಚಿವರಿಗೆ ಅಭಿನಂದನೆ: ಇದುವರೆಗೂ ದಸರಾ ಆಚರಣೆ ವಿಷಯಕ್ಕೆ ನಮ್ಮ ಅಭಿಪ್ರಾಯ ಕೇಳಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅಭಿಪ್ರಾಯ ಕೇಳಿದ್ದಕ್ಕೆ ಜಿಲ್ಲಾ ಪಂಚಾಯತಿ ಸದಸ್ಯರು ಸಂತೋಷಗೊಂಡು ಸಚಿವ ಸೋಮಣ್ಣ ಅವರಿಗೆ ಹೂಗುತ್ಛ ನೀಡಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next