ಧಾರವಾಡ: ವೃತ್ತಿಯ ಘನತೆಯನ್ನು ಮರೆತು ದಕ್ಷತೆಯಿಲ್ಲದೇ ಜವಾಬ್ದಾರಿ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಮುಖ್ಯ ಶಿಕ್ಷಕರನ್ನು ಇಲಾಖೆ ಎಂದಿಗೂ ಸಹಿಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಎಚ್ಚರಿಸಿದರು.
ಇಲ್ಲಿಯ ಡಯಟ್ ಸಭಾಭವನದಲ್ಲಿ ಬೆಳಗಾವಿ ವಿಭಾಗ ಮಟ್ಟದ 9 ಜಿಲ್ಲೆಗಳ ಸರಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ಪತ್ರಾಂಕಿತ ಗ್ರುಪ್-ಬಿ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯ ಗಣಕೀಕೃತ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮೊದಲ ವರ್ಗಾವಣೆ ಆದೇಶವನ್ನು ಮುಖ್ಯಾಧ್ಯಾಪಕ ಮಹಾದೇವ ಜಿ. ನಾಯ್ಕ ಅವರಿಗೆ ವಿತರಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಮಕ್ಕಳಿಗೆ ಜ್ಞಾನ ದಾಸೋಹ ನೀಡುವ ಅತ್ಯಂತ ಮಹತ್ವದ ತಾಣಗಳಾಗಿರುವ ಸರಕಾರಿ ಶಾಲೆಗಳು ಉಳಿದು ಬೆಳೆದು ಬರಬೇಕಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಪಕ ಪೈಪೋಟಿಯನ್ನು ನಾವಿಂದು ಎದುರಿಸುತ್ತಿದ್ದೇವೆ. ಸರಕಾರಿ ಶಾಲೆಗಳ ವಿಕಾಸಕ್ಕೆ ಮುಖ್ಯಾಧ್ಯಾಪಕರು ನಿರಂತರ ಕಾಳಜಿ ವಹಿಸಬೇಕಿದೆ. ಸರಕಾರಿ ಶಾಲೆಗಳನ್ನು ಬೆಳೆಸಲು ಶ್ರಮಿಸದೇ ತಮ್ಮ ಸಮೀಪದಲ್ಲಿಯೇ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿಸಿ ಎನ್‌ಒಸಿ ನೀಡುವ ಮುಖ್ಯಾಧ್ಯಾಪಕರ ಮೇಲೆ ಇಲಾಖೆ ಶಿಸ್ತು ಕ್ರಮ ಕೈಕೊಳ್ಳುತ್ತದೆ ಎಂದರು.
ಇಲಾಖೆಯ ಜಂಟಿ ನಿರ್ದೇಶಕ ಡಾ|ಬಿ. ಕೆ.ಎಸ್.ವರ್ಧನ್ ಮಾತನಾಡಿ, ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿದ ಹಿರಿಮೆ ಎಲ್ಲ ಮುಖ್ಯಾಧ್ಯಾಪಕರಲ್ಲಿ ಇರಬೇಕಾಗುತ್ತದೆ. ಎಲ್ಲ ಸಹ ಶಿಕ್ಷಕ-ಶಿಕ್ಷಕಿಯರು ಬೋಧನೆಗೆ ತಕ್ಕುದಾದ ಪೂರ್ವಸಿದ್ಧತೆ ಮಾಡಿಕೊಳ್ಳದೇ ತರಗತಿ ಪ್ರವೇಶ ಮಾಡದಂತೆ ಮೇಲ್ವಿಚಾರಣೆ ಮಾಡಬೇಕು ಎಂದರು.
ಇಲಾಖೆಯ ಜಂಟಿ ನಿರ್ದೇಶಕ ಡಾ|ಬಿ.ಕೆ.ಎಸ್.ವರ್ಧನ್, ಉಪ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಬಮ್ಮೊಕ್ಕನವರ, ಹಿರಿಯ ಸಹಾಯಕ ನಿರ್ದೇಶಕ ಅರ್ಜುನ ಕಂಬೋಗಿ, ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ, ಇ-ಆಡಳಿತ ಕಾರ್ಯಕ್ರಮಾಧಿಕಾರಿ ಶಾಂತಾ ಮೀಸಿ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪುಂಡಲೀಕ ಬಾರಕೇರ ಇದ್ದರು.