Advertisement

ರಾಜಿ ಸಂಧಾನ: ತಾಳಹಳ್ಳಿಯಲ್ಲಿ ನೀರಿನ ಕಿತ್ತಾಟಕ್ಕೆ ತೆರೆ

03:31 PM Jan 25, 2018 | Team Udayavani |

ಚಿಕ್ಕಬಳ್ಳಾಪುರ: ಕುಡಿಯುವ ನೀರಿಗೆ ಹೊಸ ಕೊಳವೆಬಾವಿ ಕೊರೆಸುವ ವಿಚಾರದಲ್ಲಿ ಒಮ್ಮತ ಮೂಡದೇ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ತೀವ್ರ ವಿವಾದಕ್ಕೆ ಗುರಿಯಾಗಿದ್ದ ತಾಲೂಕಿನ ತಾಳಹಳ್ಳಿಯಲ್ಲಿ ಎರಡು ಬಣಗಳ ನಡುವಿನ ನೀರಿನ ಕಿತ್ತಾಟಕ್ಕೆ ಕೊನೆಗೂ ಬುಧವಾರ ಬ್ರೇಕ್‌ ಬಿದ್ದಿದೆ.

Advertisement

ತಾಳಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ ಎರಡು ಗುಂಪುಗಳ ಪ್ರಮುಖರನ್ನು ಸೇರಿಸಿ ರಾಜೀ ಸಂಧಾನ ನಡೆಸುವ ಮೂಲಕ ಗ್ರಾಮದಲ್ಲಿ ಹೊಸ ಕೊಳವೆ ಬಾವಿಗೆ ಜಿಪಂ ಅಧ್ಯಕ್ಷರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಹೊಸ ಕೊಳವೆಬಾವಿ: ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಗ್ರಾಮಗಳಲ್ಲಿ ಸೌಹಾರ್ದತೆ ನೆಲಸಬೇಕು. ಈ ರೀತಿ ಕಿತ್ತಾಡಿಕೊಂಡರೆ ನೀರಿನ ಸಮಸ್ಯೆ ಎದುರಿಸುವರು ನೀವು ಎಂದು ಎರಡು
ಬಣಗಳ ಮುಖಂಡರಿಗೆ ಬುದ್ಧಿವಾದ ಹೇಳಿದ ಜಿಪಂ ಅಧ್ಯಕ್ಷರು ತಮ್ಮ ಸಮ್ಮುಖದಲ್ಲಿಯೇ ಗ್ರಾಮಕ್ಕೆ ಬೋರ್‌ವೆಲ್‌ ಲಾರಿ ಕರೆಸಿ ಹೊಸದಾಗಿ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಿದರು. 

ಗ್ರಾಮದಲ್ಲಿ ಇತ್ತೀಚೆಗೆ ಸರ್ಕಾರಿ ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಜಾಗದ ವಿಚಾರದಲ್ಲಿ ಒಮ್ಮತ ಮೂಡದೇ ಗ್ರಾಮಕ್ಕೆ ಬಂದಿದ್ದ ಬೋರ್‌ವೆಲ್‌ ಲಾರಿಗಳನ್ನು ಅಡ್ಡಗಟ್ಟಿ ಪರ, ವಿರೋಧವಾಗಿ ಅಹೋರಾತ್ರಿ ಧರಣಿ ನಡೆಸಿದ್ದರಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನೆಲೆಸಿತ್ತು. ಅಲ್ಲದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೊಟ್ಟ ಭರವಸೆಯಂತೆ ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಸಲಿಲ್ಲವೆಂದು ಆರೋಪಿಸಿ ತಾಳಹಳ್ಳಿ ಗ್ರಾಮದ ನೂರಾರು ಮಹಿಳೆಯರು ಕಳೆದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಖಾಲಿ ಬಿಂದಿಗೆಗಳ ಸಮೇತ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ ಗ್ರಾಮದ ರಮೇಶ್‌, ದೇವರಾಜ್‌, ನಾರಾಯಣಸ್ವಾಮಿ, ಮುನಿರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next