Advertisement

ಜಿಲ್ಲಾ ಖನಿಜ ನಿಧಿಯಿಂದ ಸಮಗ್ರ ಅಭಿವೃದ್ದಿ

05:03 PM Mar 27, 2022 | Team Udayavani |

ಬಳ್ಳಾರಿ: ಗಣಿಪ್ರದೇಶಗಳ ಮತ್ತು ಗಣಿಬಾಧಿತ ಪ್ರದೇಶಗಳ ಜನರ ಸಮಗ್ರ ಅಭಿವೃದ್ಧಿಯೇ ಜಿಲ್ಲಾ ಖನಿಜ ನಿಧಿಯ ಆಶಯವಾಗಿದೆ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ನಗರದ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ವಿವಿ, ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿ ಅವರು ಮಾತನಾಡಿದರು.

ಕೆರೆ ನೀರನ್ನು ಕೆರೆಗೆ ಚೆಲ್ಲಿ, ಸಂಪಾದಿಸಿದ್ದನ್ನ ಸಮಾಜಕ್ಕೆ ಅರ್ಪಿಸಿ ಎಂಬ ಉದ್ದೇಶದೊಂದಿಗೆ ಗಣಿಪ್ರದೇಶಗಳ ಜನರ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಐತಿಹಾಸಿಕ ನಿರ್ಣಯ ಕೈಗೊಂಡು ಈ ಡಿಎಂಎಫ್‌ ಯೋಜನೆ ಜಾರಿಗೆ ತಂದಿದ್ದಾರೆ. ಗಣಿಪ್ರದೇಶಗಳ ಜನರ ಸಮಗ್ರ ಅಭಿವೃದ್ಧಿ ಆಗಬೇಕು. ಆ ಭಾಗದ ಸಂಪನ್ಮೂಲ/ಆದಾಯ, ಆ ಭಾಗಕ್ಕೆ ಉಪಯೋಗ ಆಗಬೇಕೆಂದು ಮೊದಲ ಬಾರಿಗೆ ನಮ್ಮ ಸರ್ಕಾರ ಈ ಯೋಜನೆ ರೂಪಿಸಿದೆ ಎಂದರು.

ಕುಡಿಯುವ ನೀರು, ಆರೋಗ್ಯ, ಮಹಿಳಾ ಮಕ್ಕಳ ಕಲ್ಯಾಣ, ಕೌಶಲ್ಯ ಅಭಿವೃದ್ಧಿ, ಶಿಕ್ಷಣ ಹೀಗೆ ಮಹತ್ವದ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆದಿದೆ. ಅ ಧಿಕಾರಿಗಳು, ತಜ್ಞರು, ಸ್ವಯಂ ಸೇವಾ ಸಂಸ್ಥೆಗಳು, ಪಾಲುದಾರರೆಲ್ಲರೂ ಸೇರಿ ಜಿಲ್ಲಾ ಖನಿಜ ನಿಧಿ ಅಡಿಯ ಉತ್ತಮ ಪ್ರಯೋಗಗಳ ಮೇಲೆ ಬೆಳಕು ಚೆಲ್ಲುತ್ತಾ ಉತ್ತಮ ಕಾರ್ಯಕ್ರಮಗಳ ಕುರಿತು ಈ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಚರ್ಚೆ ನಡೆಸಿರುವುದು ಶ್ಲಾಘನೀಯ ಎಂದರು.

ಡಿಎಂಎಫ್‌ ಅನುದಾನ ಬಳಕೆಗೆ ದೇಶದಲ್ಲೇ ಅತ್ಯುತ್ತಮ ಹಾಗೂ ನೂತನ ವಿಧಾನಗಳ ಕುರಿತು ಈ ಕಾರ್ಯಾಗಾರ ಬೆಳಕು ಚೆಲ್ಲುತ್ತಿದೆ. ಈ ರೀತಿಯ ಕಾರ್ಯಕ್ರಮಗಳಿಂದ ನಮ್ಮ ಡಿಎಂಎಫ್‌ ಅನುದಾನದ ಪ್ರತಿಯೊಂದು ರೂಪಾಯಿಯನ್ನೂ ಅರ್ಥಪೂರ್ಣವಾಗಿ ಬಳಸಬಹುದು ಎಂದ ಸಚಿವರು, ವೈಯಕ್ತಿಕ ಕಲ್ಯಾಣ ಮತ್ತು ಸಾಮಾಜಿಕ ಕಲ್ಯಾಣದ ಮೂಲಕ ಸಮಗ್ರ ಅಭಿವೃದ್ಧಿಯಾಗಬೇಕು. ಅಂದಾಗ ಮಾತ್ರ ಡಿಎಂಎಫ್‌ ಉದ್ದೇಶ ಈಡೇರುತ್ತದೆ ಎಂದರು.

Advertisement

56,369 ಕೋಟಿ ರೂ. ಡಿಎಂಎಫ್‌ ಅನುದಾನ ಸಂಗ್ರಹ

ಒಂದು ಮಾಹಿತಿ ಪ್ರಕಾರ ದೇಶಾದ್ಯಂತ ಕಳೆದ ಡಿಸೆಂಬರ್‌ವರೆಗೂ 5 ಕ್ಕೂ ಹೆಚ್ಚು ವರ್ಷಗಳಲ್ಲಿ ಸುಮಾರು 56,369 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಜೂನ್‌ವರೆಗೂ ಸುಮಾರು 24499 ಕೋಟಿ ರೂಪಾಯಿಗಳನ್ನ ವಿವಿಧ ಯೋಜನೆಗಳಿಗೆ ಬಳಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ವಿವರಿಸಿದರು. ಜಿಲ್ಲಾ ಖನಿಜ ನಿಧಿ ಅನುದಾನ ಸದ್ಬಳಕೆಗೆ ಕೇಂದ್ರ ಸರ್ಕಾರವು ಕಳೆದ ಜೂನ್‌ನಲ್ಲಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದನ್ನ ಬೇರೆ ಯಾವುದೇ ಕೆಲಸ ಡೈವರ್ಟ್‌ ಮಾಡಬಾರದು ಎನ್ನುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ಅನುದಾನ ಬಳಕೆಯನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಅವರು ವಿವರಿಸಿದರು.

ಪರಿಶಿಷ್ಟರ ಅಭಿವೃದ್ಧಿಗೆ ಸರ್ಕಾರ ಬದ್ಧ

ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ 26,005 ಕೋಟಿ ರೂ.ಗಳಿದ್ದ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಇದೀಗ 28,234 ಕೋಟಿಗೆ ಹೆಚ್ಚಿಸಲಾಗಿದೆ. ಈ ವರ್ಷ 2,229 ಕೋಟಿ ರೂ. ಹೆಚ್ಚಳವಾಗಿದೆ. ಈ ಮೂಲಕ ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಬದ್ಧ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ವಿವರಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ರೂಪಿಸಿರೋ ಈ ಯೋಜನೆ ಫಲ ಇಂದು ನಮ್ಮ ಮಕ್ಕಳಿಗೆ ಲ್ಯಾಪ್‌ಟಾಪ್‌ ಮೂಲಕ ಸಿಗುತ್ತಿದೆ. ಇದರ ಸದುಪಯೋಗವನ್ನು ಪಿಎಚ್‌ಡಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಬಳಿಕ ಎಸ್‌ಸಿ, ಎಸ್‌ಟಿ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.

ವಿವಿ ಕುಲಪತಿ ಪ್ರೊ| ಸಿದ್ದು ಪಿ. ಅಲಗೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಈ. ತುಕಾರಾಂ, ಜಿ. ಸೋಮಶೇಖರರೆಡ್ಡಿ, ವೈ. ಎಂ. ಸತೀಶ್‌, ಮಾಜಿ ಸಂಸದೆ ಜೆ. ಶಾಂತಾ, ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ವಿಶೇಷಾಧಿಕಾರಿ ರಮೇಶ್‌, ವಿ.ವಿ. ಕುಲಸಚಿವ ಪ್ರೊ| ರಮೇಶ್‌ ಓಲೇಕಾರ್‌, ಪ್ರೊ| ಎಸ್‌.ಸಿ. ಪಾಟೀಲ್‌, ಹಣಕಾಸು ಅಧಿಕಾರಿ ಡಾ| ಕೆ.ಸಿ. ಪ್ರಶಾಂತ್‌, ವಿವಿ ಸಿಂಡಿಕೇಟ್‌ ಸದಸ್ಯರು, ವಿದ್ಯಾ ವಿಷಯಕ ಪರಿಷತ್‌ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next