ಬೆಂಗಳೂರು: ಮಳೆಗಾಲ ಆರಂಭವಾಗುವ ಮೊದಲೇ ನಗರದಲ್ಲಿನ ರಾಜಕಾಲುವೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳೆದ ಬಾರಿ ನಗರದಲ್ಲಿ ಸುರಿದ ಮಳೆಯಿಂದ ಅನಾಹುತ ಸಂಭವಿಸಿದ ನಗರದ ವಿವಿಧ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪಾಲಿಕೆಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಮಳೆಯಿಂದ ಹಾನಿ ಸಂಭವಿಸುವಂತಹ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ನಡೆಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದರು.
ಮೊದಲಿಗೆ ಶಾಂತಿನಗರ ಬಿಎಂಟಿಸಿ ಡಿಪೋಗೆ ಭೇಟಿ ನೀಡಿ ಪರಿಶೀಲನೆಯ ಬಳಿಕ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜೆಸಿ ರಸ್ತೆಯ ಕುಂಬಾರ ಗುಂಡಿಯ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸಿರುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದರು. ಜತೆಗೆ ಸಮಸ್ಯೆ ಆಗುತ್ತಿರುವುದಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ ಕೂಡಲೇ ಪ್ರಕರಣವನ್ನು ಇತ್ಯರ್ಥಪಡಿಸಲು ಪಾಲಿಕೆಯ ಕಾನೂನು ವಿಭಾಗ ಮುಂದಾಗಬೇಕು ಎಂದು ಆದೇಶಿಸಿದ್ದಾರೆ.
ಅರ್ಚಕರ ಮನೆಗೆ ಸಚಿವ ಭೇಟಿ: ಕುರುಬರಹಳ್ಳಿಯಲ್ಲಿ ರಾಜಕಾಲುವೆ ಮೇಲೆ ಹಾಕಲಾಗಿದ್ದ ಸ್ಲಾéಬ್ ಮುರಿದು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಅರ್ಚಕ ವಾಸುದೇವ ಭಟ್ ಮನೆಗೆ ಭೇಟಿ ನೀಡಿದ ಸಚಿವ ಜಾರ್ಜ್, ಕುಟುಂಬದ ಯೋಗಕ್ಷೇಮ ವಿಚಾರಿಸಿದರು. ಆನಂತರ ರಾಜಕಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿ ವಿಳಂಬವಾಗುವುದಕ್ಕೆ ಕಾರಣವಾದ ಜಲಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವರೊಂದಿಗೆ ಶಾಸಕರಾದ ಆರ್.ವಿ.ದೇವರಾಜ್, ಎನ್.ಎ.ಹ್ಯಾರೀಸ್, ಕೆ.ಗೋಪಾಲಯ್ಯ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಉಪಸ್ಥಿತರಿದ್ದರು.
ಶಾಶ್ವತ ಪರಿಹಾರ: ಶಾಂತಿನಗರದಲ್ಲಿರುವ ಬಿಎಂಟಿಸಿ ಡಿಪೋಗೆ ನೀರು ನುಗ್ಗುವುದನ್ನು ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 15 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಯೋಜನೆ ರೂಪಿಸಿದೆ. ಬುಧವಾರ ಸಚಿವ ಕೆ.ಜೆ.ಜಾರ್ಜ್ ಕಾಮಗಾರಿಗೆ ಚಾಲನೆ ನೀಡಲಿದ್ದು, ಮಳೆನೀರು ನುಗ್ಗದಂತೆ ಡಿಪೋ ಭಾಗವನ್ನು ಎತ್ತರಿಸುವುದು ಹಾಗೂ ಡಿಪೋಗೆ ನುಗ್ಗುತ್ತಿದ್ದ ನೀರು ರಾಜಕಾಲುವೆಗೆ ಹರಿದುಹೋಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.