Advertisement

ದಸರಾಕ್ಕೂ ಮುನ್ನ ಬೆಟ್ಟದಲ್ಲಿನ ಕಾಮಗಾರಿ ಪೂರ್ಣಗೊಳಿಸಿ

09:40 PM Jun 29, 2019 | Lakshmi GovindaRaj |

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ ಪ್ರಾರಂಭಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸೂಚಿಸಿದರು.

Advertisement

ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ದಾಸೋಹ ಭವನದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, 70 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬಹುಮಹಡಿ ಪಾರ್ಕಿಂಗ್‌, ವಾಣಿಜ್ಯ ಮಳಿಗೆಗಳ ನಿರ್ಮಾಣ, ಸರತಿ ಸಾಲುಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮೊರಾರ್ಜಿ ದೇಸಾಯಿ ಶಾಲೆಯ ರೀತಿ ಪ್ರಥಮ ದರ್ಜೆ ಕಾಲೇಜು ತೆರೆಯುವ ಬಗ್ಗೆ ಚಿಂತನೆ ನಡೆಸಿ, ಇದಕ್ಕಾಗಿ 10 ಎಕರೆ ಸ್ಥಳ ಗುರುತಿಸಿದರೆ, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕಟ್ಟಡ ನಿರ್ಮಾಣಕ್ಕೆ ಬೇಕಿರುವ ಅಗತ್ಯಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದರು.

ಕೌಶಲ್ಯ ತರಬೇತಿ: ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಬೇಕು. ಇದಕ್ಕಾಗಿ ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಅಯೋಜಿಸಿ, ಮೈಸೂರು ಜಿಲ್ಲೆಯಲ್ಲಿ ಹಲವಾರು ಕೈಗಾರಿಕೆಗಳಿವೆ, ಅವರಿಂದ ಸಿಎಸ್‌ಆರ್‌ ನಿಧಿಯಡಿ ಹಣ ಸಂಗ್ರಹಿಸಿ ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ಪುಸ್ತಕ, ಕಂಪ್ಯೂಟರ್‌ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಿ ಎಂದರು.

ಸರ್ಕಾರಿ ಕಾಲೇಜುಗಳು ಉತ್ತಮ ಸ್ಥಿತಿಯಲ್ಲಿರಬೇಕು. ಅಲ್ಲಿ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಕುಲಪತಿಗಳ ಸಭೆ ನಡೆಸಿ ಅವರಿಗೆ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

Advertisement

ಆಷಾಢ ಶುಕ್ರವಾರ ಸಿದ್ಧತೆ: ಈ ವರ್ಷ ಜುಲೈ 5,12,19 ಹಾಗೂ 26ರಂದು ನಡೆಯಲಿರುವ ಆಷಾಢ‌ ಶುಕ್ರವಾರ ಕಾರ್ಯಕ್ರಮ ಹಾಗೂ ಜುಲೈ 24ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ವರ್ಧಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ, ಭಕ್ತಾದಿಗಳು ಅದರಲ್ಲೂ ಮುಖ್ಯವಾಗಿ ಹೆಂಗಸರು ಹಾಗೂ ಮಕ್ಕಳಿಗೆ ತೊಂದರೆಯಾಗಬಾರದು. ಹೆಂಗಸರಿಗೆ ಪ್ರತ್ಯೇಕ ಸಾಲು ಮಾಡುವ ಬಗ್ಗೆ ಚಿಂತನೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಬಸ್‌ ವ್ಯವಸ್ಥೆ: ಕೆಎಸ್‌ಆರ್‌ಟಿಸಿ ವತಿಯಿಂದ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಹಾಗೂ ಅನುಭವವುಳ್ಳ ವಾಹನ ಚಾಲಕರನ್ನು ಅಷಾಢ ಶುಕ್ರವಾರದಂದು ನಿಯೋಜಿಸಿ. ಹೆಲಿಪ್ಯಾಡ್‌ ಬಳಿಯಲ್ಲಿ ಭಕ್ತಾದಿಗಳು ಬಸ್ಸುಗಳನ್ನು ಹತ್ತಲು ನಿಲ್ಲುವ ಸರತಿಯ ಸ್ಥಳದಲ್ಲಿ ತಾತ್ಕಾಲಿಕವಾದ ಬ್ಯಾರಿಕೇಡಿಂಗ್‌ಗಳನ್ನು ನಿರ್ಮಿಸಿ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮ: ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮುಂಜಾಗ್ರತಾ ಕ್ರಮಕ್ಕಾಗಿ ಭಕ್ತಾದಿಗಳ ವೈದ್ಯಕೀಯ ಚಿಕಿತ್ಸೆಗಾಗಿ 2 ರಿಂದ 3 ಚಿಕಿತ್ಸಾ ಕೇಂದ್ರಗಳನ್ನು ತೆರೆಯಿರಿ, ಅಗತ್ಯ ಔಷಧಗಳೊಂದಿಗೆ ಸಾಕಷ್ಟು ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್‌ ಇಲಾಖೆಯವರು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಅವಶ್ಯಬಿದ್ದಲ್ಲಿ ಬೇರೆ ಜಿಲ್ಲೆಗಳಿಂದ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಮುಡಾ ಅಧ್ಯಕ್ಷ ಎಚ್‌.ಎನ್‌.ವಿಜಯ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಮುಡಾ ಆಯುಕ್ತ ಪಿ.ಎಸ್‌.ಕಾಂತರಾಜು, ಮುಜರಾಯಿ ತಹಶೀಲ್ದಾರ್‌ ಯತಿರಾಜ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next