Advertisement

Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್‌ ಅಳವಡಿಕೆ ಪೂರ್ಣ

02:30 PM Jan 12, 2025 | Team Udayavani |

ಮಹಾನಗರ: ಪಂಪ್‌ವೆಲ್‌- ಪಡೀಲ್‌ ಮುಖ್ಯ ರಸ್ತೆಯ ನಾಗುರಿ ಬಳಿ ಮಂಗಳೂರು ನಗರಕ್ಕೆ ನೀರು ಸರಬರಾಜಾಗುತ್ತಿದ್ದ ಮುಖ್ಯ ಪೈಪ್‌ಲೈನ್‌ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.

Advertisement

ಸರಿಸುಮಾರು 170 ಮೀ. ನಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ನ ಮುಖ್ಯ ಕೊಳವೆ ಅಳವಡಿಕೆ ಕಾರಣದಿಂದಾಗಿ ಈ ಭಾಗದಲ್ಲಿ ಕಾಂಕ್ರೀಟ್‌ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಆ ಭಾಗದ ರಸ್ತೆ ನಿರ್ಮಾಣ ಅಪೂರ್ಣ ವಾಗಿತ್ತು. ಇದೀಗ ಪೈಪ್‌ಲೈನ್‌ ಅಳವಡಿಕೆ ಕಾರ್ಯವನ್ನು ಪಾಲಿಕೆ ಮೂಲಕ ಪೂರ್ಣಗೊಳಿಸಲಾಗಿದೆ. ನಾಗುರಿ ಗರೋಡಿ ಕ್ಷೇತ್ರದಲ್ಲಿ ಜಾತ್ರೆ ಮುಗಿದ ಬಳಿಕ ರಸ್ತೆ ಕಾಂಕ್ರೀಟ್‌ ಕೆಲಸ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

content-img

ಸವಾರರಿಗೆ ಸಮಸ್ಯೆ
ಸುಮಾರು ಮೂರು ವರ್ಷಗಳಿಂದ ಸ್ಮಾರ್ಟ್‌ ಸಿಟಿ ಮೂಲಕ ಪಂಪ್‌ವೆಲ್‌-ಪಡೀಲ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ನಾಗುರಿ ಬಳಿ ಪೈಪ್‌ಲೈನ್‌ ಹಾಗೂ ರೈಲು ನಿಲ್ದಾಣ ತಿರುವು ಪ್ರದೇಶದಲ್ಲೂ ಕೂಡ ಅಲ್ಪ ಪ್ರಮಾಣದ ಕಾಮಗಾರಿ ಉಳಿಕೆಯಾಗಿದೆ. ಇದು ಬೆಳಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ನಿತ್ಯ ಸಂಚಾರ ದಟ್ಟಣೆಗೆ ಕಾರಣವಾಗಿತ್ತಿದೆ. ಎರಡೂ ಕಡೆಗಳಿಗೆ ತೆರಳುವ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುವ ಕಾರಣ ಹಾಗೂ ಇದೇ ಪ್ರದೇಶದಲ್ಲಿ ಬಸ್‌ ನಿಲ್ದಾಣ ಇರುವ ಕಾರಣ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ವಾಹನ ಸವಾರರಿಗೆ ನಿತ್ಯ ಟ್ರಾಫಿಕ್‌ ಜಾಮ್‌ ಬಿಸಿ ತಪ್ಪುತ್ತಿಲ್ಲ.

Advertisement

ನಗರದಲ್ಲಿ ಸುಮಾರು 50 ವರ್ಷ ಹಳೆಯ ನೀರಿನ ಪೈಪ್‌ಲೈನ್‌ ಇದ್ದು, ಇದರಿಂದ ಹಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ತುಂಬೆಯಿಂದ ಬೆಂದೂರು, ಪಣಂಬೂರಿಗೆ ತೆರಳುವ ಮುಖ್ಯ ಕೊಳವೆಯು ನಾಗುರಿ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿತ್ತು. ಇದರಿಂದ ನೀರು ಪೋಲಾಗುತ್ತಿತ್ತು. ಇದರ ಹೊರತಾಗಿಯೂ ಕಾಂಕ್ರೀಟ್‌ ನಡೆಸಿದ್ದರೆ ಮತ್ತೆ ಸಮಸ್ಯೆಯಾಗುತ್ತಿತ್ತು. ಈ ಕಾರಣದಿಂದಾಗಿ ಕೊಳವೆ ಅಳವಡಿಕೆ ಮಾಡಲಾಗಿದೆ. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾತ್ರೆ ಮುಗಿದ ಬಳಿಕ ಕಾಂಕ್ರೀಟ್‌ ಅಳವಡಿಕೆ
ಪಾಲಿಕೆ ಅನುದಾನ ಬಳಸಿಕೊಂಡು ಪೈಪ್‌ಲೈನ್‌ ಕಾಮಗಾರಿ ನಡೆಸಲಾಗಿದೆ. ಪ್ರಸ್ತುತ ರಸ್ತೆ ಸರಿಪಡಿಸುವ ಕೆಲಸ ಆರಂಭವಾಗಿದೆ. ನಾಗುರಿ ಗರೋಡಿ ಜಾತ್ರೆಯ ಸಂದರ್ಭ ಮಣ್ಣು, ಜಲ್ಲಿ ಹಾಕಿ ತಾತ್ಕಾಲಿಕ ನೆಲೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಜಾತ್ರೆ ಮುಗಿದ ಬಳಿಕ ಕಾಂಕ್ರೀಟ್‌ ಅಳವಡಿಸುತ್ತೇವೆ.
– ಸಂದೀಪ್‌ ಗರೋಡಿ, ಪಾಲಿಕೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.