ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ಬಿಎಂಆರ್‌ಸಿಎಲ್ ವತಿಯಿಂದ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ನಗರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ವಿಧಾನಸೌಧದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಬಿಬಿಎಂಪಿ, ಬಿಡಿಎ ಜಲಮಂಡಳಿ, ಬಿಎಂಆರ್‌ಸಿಎಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಕಳೆದ ನಾಲ್ಕು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲಾದ ಮೇಲು ಸೇತುವೆ, ಕೆಳ ಸೇತುವೆ, ಟೆಂಡರ್ ಶ್ಯೂರ್ ರಸ್ತೆಗಳು, ರಸ್ತೆಗಳ ವಿಸ್ತರಣೆ, ಪಾದಚಾರಿ ಮಾರ್ಗಗಳು, ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಕಾಮಗಾರಿ ಕುರಿತು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ನಗರ ಸಾರಿಗೆ ವ್ಯವಸ್ಥೆ, ಸಂಚಾರ ದಟ್ಟಣೆ ನಿವಾರಣೆ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಮೆಟ್ರೋ ಕುರಿತು ಚರ್ಚೆ: ಮೆಟ್ರೋ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ ರೈಲು ಮಾರ್ಗ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಆಗಸ್ಟ್ ವೇಳೆಗೆ ಯೋಜನಾ ವರದಿ ತಯಾರಾಗಲಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಅಲ್ಲದೇ ಕೆ.ಆರ್.ಪುರದಿಂದ ಹೆಬ್ಟಾಳದವರೆಗೆ ಮೆಟ್ರೋ ರೈಲು ಮಾರ್ಗ ನಿರ್ಮಿಸುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದೆ. ಈ ಯೋಜನೆ ಕುರಿತು ವರದಿ ಸಿದ್ಧಪಡಿಸಲು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಬೆಂಗಳೂರು ನಗರದಲ್ಲಿರುವ ಕೆರೆಗಳ ಸ್ಥಿತಿಗತಿ, ಅವುಗಳ ಪುನರುಜ್ಜೀವನ, ಉಪ ನಗರ ರೈಲು ಯೋಜನೆ ಕುರಿತಾಗಿಯೂ ಚರ್ಚೆ ನಡೆಯಿತು. ನಗರದಲ್ಲಿ ಉತ್ಪಾದನೆ ಆಗುತ್ತಿರುವ ಘನತ್ಯಾಜ್ಯ ಮತ್ತು ಅದರ ನಿರ್ವಹಣೆ, ತ್ಯಾಜ್ಯ ನೀರು ಮತ್ತು ಸಂಸ್ಕರಣೆ ಬಗ್ಗೆ ಅಧಿಕಾರಿಗಳು ವಿವರ ನೀಡಿದರು ಎಂದು ಮುಖ್ಯಮಂತ್ರಿಯವರ ಸಚಿವಾಲಯ ಮಾಹಿತಿ ನೀಡಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಅ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕೆ. ಅತೀಕ್, ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ನಗರ ಪೊಲೀಸ್ ಆಯುಕ್ತ ಪ್ರವೀಣ… ಸೂದ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಸ್.ಪಾಟೀಲ, ಸಿದ್ದಯ್ಯ, ಬಯೋಕಾನ್ ಮುಖ್ಯಸ್ಥೆ ಕಿರಣ ಮಜುಂದಾರ್ ಶಾ, ಜನಾಗ್ರಹದ ಸ್ವಾತಿ ರಾಮನಾಥನ್ ಮತ್ತು ರೇವತಿ ಅಶೋಕ ಮತ್ತಿತರರು ಸಭೆಯಲ್ಲಿದ್ದರು.
ನಮ್ಮ ಅವಧಿಯಲ್ಲೇ ಎಲ್ಲ ಕಾಮಗಾರಿ ಪೂರ್ಣ: “ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಎರಡು ವರ್ಷದಲ್ಲಿ 7,300 ಕೋಟಿ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಪೈಕಿ ಈಗಾಗಲೇ ಬಹುತೇಕ ಕಾಮಗಾರಿಗಳು ಮುಗಿದಿವೆ. 2,500 ಕೋಟಿ ರೂ. ವೆಚ್ಚದ ಕಾಮಗಾರಿಗಳಷ್ಟೇ ಬಾಕಿ ಉಳಿದಿದ್ದು, ಅವುಗಳನ್ನು ನೆವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ನಮ್ಮ ಸರ್ಕಾರದ ಅವಧಿಯಲ್ಲೇ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಮುಂದೆಯೂ ನಮ್ಮದೇ ಸರ್ಕಾರ ಬರಲಿದ್ದು, ಆಗಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ,’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಲ್ಲಿನ ರಸ್ತೆಗಳ ವಿಸ್ತೀರ್ಣವನ್ನು 40 ಅಡಿಯಿಂದ 30 ಅಡಿಗೆ ಕಡಿತಗೊಳಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹೀಗಿರುವಾಗ ಕೆಲವು ಗಣ್ಯರು ವಿರೋಶಿಸುವುದು ಸರಿಯಲ್ಲ.
-ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ