Advertisement

ಗೋಶಾಲೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ

04:42 PM Aug 23, 2022 | Team Udayavani |

ಕೊಪ್ಪಳ: ಜಿಲ್ಲೆಯ ಬೇವೂರು ಗ್ರಾಮದ ನೂತನ ಸರ್ಕಾರಿ ಗೋಶಾಲೆಯ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಅವರು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಡಾಡಿ ದನಗಳ ಮಾಲಿಕರನ್ನು ಗುರುತಿಸುವ ಮತ್ತು ಮಾಲಿಕರಿಲ್ಲದ ಜಾನುವಾರು ಗೋಶಾಲೆಗೆ ಒಪ್ಪಿಸುವ ಕುರಿತು ಸೂಕ್ತ ಕ್ರಮವಹಿಸಬೇಕು. ನಗರದಲ್ಲಿ ಬಿಡಾಡಿ ದನಗಳ ಮಾಲಿಕರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸೂಚಿಸಬೇಕು. ರೇಬೀಸ್‌ ರೋಗ ತಡೆಗೆ ಸೆಪ್ಟೆಂಬರ್‌ನಲ್ಲಿ ಪಶು ಇಲಾಖೆಯಿಂದ ಹಮ್ಮಿಕೊಳ್ಳುವ ರೇಬಿಸ್‌ ರೋಗ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಗರ ಸಭೆ, ಪುರಸಭೆ, ಪಪಂ, ತಾಪಂ ಹಾಗೂ ಗ್ರಾಪಂ ಸಹಕರಿಸಿ, ನಿಯಮಾನುಸಾರ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಸರ್ಕಾರದ ಪುಣ್ಯ ಕೋಟಿ ದತ್ತು ಯೋಜನೆ, ಜಾನುವಾರು ದತ್ತು ಕಾರ್ಯಕ್ರಮ, ಗೋಶಾಲೆಗಳಿಗೆ ದೇಣಿಗೆ ನೀಡುವ ಕಾರ್ಯಕ್ರಮ, ಹಸುವಿನ ಆಹಾರ ಪೂರೈಕಾ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಬೇಕು. ದಾನಿಗಳನ್ನು ಗುರುತಿಸಲು ಜಿಲ್ಲೆಯ ಎಲ್ಲ ಖಾಸಗಿ ಗೋಶಾಲೆಗಳು ಸಹಕರಿಸಬೇಕೆಂದು ಗೋಶಾಲೆಗಳ ಪ್ರತಿನಿ ಗಳಿಗೆ ಸಲಹೆ ನೀಡಿದರು.

ಬೇವೂರು ಗೋಶಾಲೆಗೆ ಅವಶ್ಯ ಎಲ್ಲ ಕಾಮಗಾರಿಗಳನ್ನು ಜಿಪಂ ಸಹಯೋಗದೊಂದಿಗೆ ಕೈಗೊಳ್ಳಬೇಕು ಮತ್ತು ಗೋಶಾಲೆಗೆ ಬಿಡುಗಡೆಯಾದ ಸಂಪೂರ್ಣ ಅನುದಾನವನ್ನು ಗೋಶಾಲೆಗೆ ಅಗತ್ಯಕ್ಕೆ ಅನುಸಾರವಾಗಿ ಬಳಸಿಕೊಂಡು, ಈ ಗೋಶಾಲೆಗೆ ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ, ಗೋಶಾಲೆಗೆ ಪ್ರಥಮ ಪ್ರಾಮುಖ್ಯತೆ ನೀಡಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದರು.

Advertisement

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ| ಎಚ್‌. ನಾಗರಾಜ್‌ ಮಾತನಾಡಿ, 2022-23ನೇ ಸಾಲಿನಲ್ಲಿ ಮೈಸೂರಿನ ಪಿಂಜರಾಪೋಲ್‌ ಮತ್ತು ಇತರೇ ಗೋಶಾಲೆಗಳಿಗೆ ಸಹಾಯಾನುಧನ ಕಾರ್ಯಕ್ರಮದಡಿ ನಗರದ ಶ್ರೀ ಮಹಾವೀರ್‌ ಜೈನ್‌ ಗೋಶಾಲೆ, ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಧರ ಮುರಡಿ ಹಿರೇಮಠ ಗೋಶಾಲೆ, ಕುಷ್ಟಗಿ ತಾಲೂಕಿನ ಗುಡಿಕೆಲಕೇರಿ ಜಯಮಾಲಾ ಜೈನ್‌ ಗೋಶಾಲೆ ಹಾಗೂ ಗಂಗಾವತಿ ತಾಲೂಕಿನ ಆನೆಗುಂದಿಯ ಶ್ರೀ ದುರ್ಗಾ ಮಾತಾ ಗೋಶಾಲಾ ಟ್ರಸ್ಟ್‌, ಈ ನಾಲ್ಕು ಖಾಸಗಿ ಗೋಶಾಲೆಗಳಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಈ ನಾಲ್ಕು ಗೋಶಾಲೆಯಲ್ಲಿನ ಜಾನುವಾರುಗಳಿಗೆ ಪ್ರತಿ ಜಾನುವಾರುವಿಗೆ ಪ್ರತಿದಿನಕ್ಕೆ ರೂ. 70 ರಂತೆ ಪ್ರತಿ ಗೋಶಾಲೆಗೆ ಗರಿಷ್ಠ 200 ಜಾನುವಾರುಗಳಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.

ಮಾಲಿಕರನ್ನು ಹೊಂದಿರುವ ಬಿಡಾಡಿ ದನಗಳಿಗೆ ಕಡ್ಡಾಯವಾಗಿ ಬಾರ್‌-ಕೋಡ್‌ ಹೊಂದಿರುವ ಕಿವಿಯೋಲೆ ಅಳವಡಿಸುವ ಅವಶ್ಯಕತೆಯಿದ್ದು, ಸ್ಥಳಿಯ ಸಂಸ್ಥೆಗಳ ವಾಹನಗಳ ಮೂಲಕ ಈ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಮತ್ತು ಬಿಡಾಡಿ ದನಗಳ ನಿರ್ವಹಣೆಗೆ ಸಹಕರಿಸುವಂತೆ ಕೋರಿದರು. ರೇಬಿಸ್‌ ಲಸಿಕಾ ಅಭಿಯಾನ: ರಾಜ್ಯದಲ್ಲಿ ರೇಬಿಸ್‌ ರೋಗ ತಡೆಗಟ್ಟುವ ಕಾರ್ಯಕ್ರಮದಡಿ ರೇಬಿಸ್‌ ರೋಗ ಲಸಿಕಾ ಅಭಿಯಾನವನ್ನು ಸೆಪ್ಟೆಂಬರನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಜಿಲ್ಲೆಯಲ್ಲಿ ಒಟ್ಟು 22,743 ನಾಯಿಗಳಿದ್ದು, ಲಸಿಕಾ ಅಭಿಯಾನಕ್ಕೆ ಜಿಲ್ಲೆಯಲ್ಲಿರುವ ಶೇ. 50ರಷ್ಟು ನಾಯಿಗಳಿಗೆ ಈ ಲಸಿಕೆ ಹಾಕುವ ಗುರಿಯನ್ನು ನಿಗದಿ ಪಡಿಸಿದೆ. ಬೀದಿ ನಾಯಿಗಳಿಗೆ ನಗರಸಭೆ, ಪುರಸಭೆ, ಜಿಪಂ, ತಾಪಂ, ಗ್ರಾಪಂ ಸಹಯೋಗದಿಂದ ಲಸಿಕಾ ಅಭಿಯಾನ ಅನುಷ್ಠಾನಗೊಳಿಸಲಾಗುವುದು ಎಂದರು.

ಸಹಕಾರ ಸಂಘ ಸ್ಥಾಪನೆ: ಗೋ ಉತ್ಪನ್ನಗಳ ಮಾರಾಟಕ್ಕಾಗಿ ಗೋ ಮಾತಾ ಸಹಕಾರ ಸಂಘವನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಿಂದ ದುರ್ಗಾಮಾತಾ ಗೋಶಾಲೆಯ ರಾಜಣ್ಣ ಅವರನ್ನು ಪ್ರತಿನಿಧಿ ಯನ್ನಾಗಿ ನೇಮಿಸಿದೆ. ಜಿಲ್ಲೆಯಲ್ಲಿ ಎರಡು ಗೋಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಲಾಗುತ್ತಿದ್ದು, ಇನ್ನೊಂದು ಕನಕಗಿರಿ ತಾಲೂಕಿನ ಹುಲಿಹೈದರ ಹೋಬಳಿಯ ಕನಕಾಪುರ ಗ್ರಾಮದಲ್ಲಿ 20 ಎಕರೆ ಜಮೀನಲ್ಲಿ ಸರ್ಕಾರಿ ಗೋಶಾಲೆಯನ್ನು ನಿರ್ಮಿಸಲು ಉದ್ದೇಶಿಸಿದ್ದು, ಭೂಮಿ ಮಂಜೂರಾತಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ವಿವಿಧ ತಾಲೂಕು ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಗೋಶಾಲೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪುಣ್ಯ ಕೋಟಿ ದತ್ತು ಯೋಜನೆ: ಸರ್ಕಾರವು ಪುಣ್ಯ ಕೋಟಿ ದತ್ತು ಯೋಜನೆ ಘೂàಷಿಸಿದೆ. ಇ-ಪೋರ್ಟಲ್‌ ಮೂಲಕ ಸಾರ್ವಜನಿಕರಿಗೆ, ಗೋವನ್ನು ದತ್ತು ತೆಗೆದುಕೊಳ್ಳಲು, ಗೋಶಾಲೆಗೆ ದೇಣಿಗೆ ನೀಡಲು ಮತ್ತು ಗೋವಿನ ಆಹಾರಕ್ಕಾಗಿ ಆರ್ಥಿಕ ನೆರವು ನೀಡಲು ಒಂದು ವೇದಿಕೆಯಾಗಿದೆ. ಆಸಕ್ತರು ಇಲಾಖಾ ವೆಬ್‌ಸೈಟ್‌ https//punyakkoti.karahvs.in ನಲ್ಲಿ ಲಾಗಿನ್‌ ಆಗಿ ಆಲ್‌ಲೈನ್‌ನಲ್ಲಿ ವಿವಿಧ ಕಾರ್ಯಗಳಿಗೆ ಆರ್ಥಿಕ ನೆರವು ನೀಡಬಹುದು ಎಂದು ಪಶು ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next