ಕೊಪ್ಪಳ: ಕೆನಾಲ್, ಡ್ಯಾಂ, ಕಾಲುವೆ ಇತರೆ ನೀರಾವರಿಗೆ ಸಂಬಂಧಿಸಿದ ಯಾವುದೇ ಕೆಲಸ ಮತ್ತು ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ನಂತರ ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ನೀರಾವರಿ ಕೇಂದ್ರ ವಲಯ, ಮುನಿರಾಬಾದ್ ಅಡಿಯಲ್ಲಿ ಬರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು, ತಂತ್ರಜ್ಞರು ಒಂದು ಸಲ ಅಂದಾಜು ಪತ್ರಿಕೆ ತಯಾರಿಸಿದ ಮೇಲೆ ಅದು ಮತೊಮ್ಮೆ ಪರಿಷ್ಕೃತ ಆಗಬಾರದು. ಹಾಗೇನಾದರೂ ಆದರೆ ಅದು ಇಂಜನಿಯರ್ ಗಳು ಸರಿಯಾಗಿ ಮೊದಲೇ ತಾವು ಎಸ್ಟಿಮೇಟ್ ತಯಾರಿಸಿಲ್ಲ. ಎಂದಾಗುತ್ತದೆ ಮತ್ತು ಅದಕ್ಕೆ ತಮಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ:ಸರಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಿ : ಅಧಿಕಾರಿಗಳಿಗೆ ಸಚಿವೆ ಜೊಲ್ಲೆ ಸೂಚನೆ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ನಿಗದಿತ ಅವಧಿಯಲ್ಲಿ ನೀರಾವರಿ ಯೋಜನೆಗಳು ಮುಗಿಯದಿದ್ದರೆ ರೈತರಿಗೆ ನೀರು ಕೊಡುವುದು ಹೇಗೆ ಸಾಧ್ಯ? ಅಧಿಕಾರಿಗಳು ಯಾವುದೇ ಯೋಜನೆಗಳನ್ನು ಅನಾವಶ್ಯಕವಾಗಿ ನೆಪ ಹೇಳಿ ವಿಳಂಬ ಮಾಡಬಾರದು ಎಂದರು.
ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ವೈ. ದೇವೇಂದ್ರಪ್ಪ, ಶಾಸಕರಾದ ಪರಣ್ಣ ಮುನವಳ್ಳಿ, ವೆಂಕಟರಾವ್ ನಾಡಗೌಡ, ಬಸವರಾಜ ದಢೇಸುಗೂರು, ಮುನಿರಾಬಾದ್ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕೃಷಿ ಬೆಳೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ. ಗುಂಗೆ, ಮುಖ್ಯ ಅಭಿಯಂತರ ಕೃಷ್ಣಾಜಿ ಚವ್ಹಾಣ, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಲ್. ಬಸವರಾಜ್, ತುಂಗಭದ್ರಾ ನಾಲಾ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರ ಪಿ.ಬಿ. ಪ್ರಕಾಶ,
ಕಾರ್ಯಪಾಲಕ ಅಭಿಯಂತರ ಕೆ.ಬಿ.ಎಚ್. ಶಿವಶಂಕರ್, ಕೊಪ್ಪಳ ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ಸೇರಿದಂತೆ ಇತರರಿದ್ದರು.