Advertisement

ಮೇ 20ರೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ

09:30 PM Jan 27, 2020 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಕಾಮಗಾರಿಗಳನ್ನು ಮೇ 20ರೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

Advertisement

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಯು ಕುಂಠಿತವಾಗಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಆರಂಭವಾಗಿ ಸಾಕಷ್ಟು ಸಮಯವಾಗಿದೆ. ಹೀಗಾಗಿ ಮೇ 20ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಅನುಕೂಲ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತೊಡಕುಗಳಿದ್ದಲ್ಲಿ ಪರಿಹರಿಸಿಕೊಳ್ಳಿ: ಅರಣ್ಯ ಪ್ರದೇಶದಲ್ಲಿ ರಸ್ತೆ ಹಾದು ಹೋಗಬಹುದಾದ ಮಾರ್ಗಗಳಿಗೆ ತೊಡಕುಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಉನ್ನತ ಮಟ್ಟದಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕಾದ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕಿಸಬೇಕು. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಬೇಕು. ನಿಯಾಮಾನುಸಾರ ಎಲ್ಲಾ ಅಗತ್ಯ ಅಂಶಗಳನ್ನು ಪರಿಶೀಲಿಸಿಕೊಂಡು ವಿಳಂಬ ಮಾಡದೇ ರಸ್ತೆ ಕಾಮಗಾರಿಯನ್ನು ಪೂರೈಸಬೇಕು ಎಂದು ತಿಳಿಸಿದರು.

ಸೂಚನೆ ನೀಡಿದ್ದರೂ ಕ್ರಮ ವಹಿಸಿಲ್ಲ: ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಮುಂದುವರಿದ ರಾಮಸಮುದ್ರದ ಭಾಗದಲ್ಲಿ ರಸ್ತೆ ಕೆಲಸ ಅಪೂರ್ಣವಾಗಿದೆ. ಕೆಲವೆಡೆ ಚರಂಡಿ ಸಹ ನಿರ್ಮಾಣವಾಗಿಲ್ಲ. ಯೋಜನೆಗೆ ನಿಗದಿಪಡಿಸಲಾಗಿದ್ದ ಅನುದಾನದಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದರೂ ಸಹ ಕ್ರಮ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲಿಸಿದ ಶ್ರೀನಿವಾಸ ಪ್ರಸಾದ್‌, ಗ್ರಾಮೀಣ ಜನರು ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಒದಗಿಸಬೇಕು. ನರೇಗಾ ಯೋಜನೆಯ ಉದ್ದೇಶವೇ ಸ್ಥಳೀಯವಾಗಿ ಗ್ರಾಮೀಣರಿಗೆ ಕೆಲಸ ನೀಡುವುದು ಆಗಿದೆ. ಸಕಾಲದಲ್ಲಿ ನರೇಗಾ ಯೋಜನೆಯ ಕೂಲಿ ಹಣ ಪಾವತಿ ಮಾಡುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

Advertisement

ಜನರಿಗೆ ನರೇಗಾ ಯೋಜನೆ ತಲುಪಿಸಿ: ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳು ಜನರಿಗೆ ನರೇಗಾದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಬೇಕು. ಜನರೊಂದಿಗೆ ಚರ್ಚೆ ಹಾಗೂ ಸಂವಾದದ ಮೂಲಕ ಉದ್ಯೋಗದ ಬಗ್ಗೆ ಮಾಹಿತಿ ನೀಡಬೇಕು. ಪ್ರಗತಿ ಕುಂಠಿತವಾಗಿರುವ ತಾಲೂಕಿನಲ್ಲಿ ನರೇಗಾದ ಹೆಚ್ಚಿನ ಗುರಿ ಸಾಧನೆಗೆ ಗಮನ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕುಡಿಯುವ ನೀರಿನ ಯೋಜನೆ ಪರಿಶೀಲಿಸಿದ ವೇಳೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಹಾಗೂ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯಲ್ಲೂ ಚುರುಕಿನಿಂದ ಕೆಲಸಗಳು ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಅರ್ಹರಿಗೆ ಯೋಜನೆ ತಲುಪಿಸಿ: ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು. ರೋಗ ಮುನ್ನಚರಿಕೆ ಕ್ರಮಗಳ ಬಗ್ಗೆ ಸಲಹೆ ನೀಡಬೇಕು. ಆಯುಷ್ಮಾನ್‌ ಕಾರ್ಡ್‌ಗಳನ್ನು ಅರ್ಹರೆಲ್ಲರಿಗೂ ತಲುಪಿಸುವ ಪ್ರಕ್ರಿಯೆಯನ್ನು ನಿರ್ವಹಿಸಬೇಕು ಎಂದು ಸಂಸದರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅರಣ್ಯ, ಕೃಷಿ, ಶಿಕ್ಷಣ, ಸೆಸ್ಕ್, ಸಮಾಜ ಕಲ್ಯಾಣ, ವಸತಿ, ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್‌ ಕುಮಾರ್‌ ಸೇರಿದಂತೆ ಜನಪ್ರತಿನಿಧಿಗಳು, ಸದಸ್ಯರು ಹಾಜರಿದ್ದರು.

ಕೊಳ್ಳೇಗಾಲ ಪಟ್ಟಣದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಡಿವೈಡರ್‌ಗಳನ್ನು ಹಾಕಲಾಗಿದೆ. ಇದರಿಂದ ಜನರಿಗೆ ಹಾಗೂ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಪೊಲೀಸ್‌ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಅಗತ್ಯವಿರುವೆಡೆ ಡಿವೈಡರ್‌ಗಳನ್ನು ತೆರವುಗೊಳಿಸಬೇಕು.
-ಎನ್‌.ಮಹೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next