ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು “ಆಧುನಿಕ ಶಕುನಿ’ ಎಂದು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.
ಈ ಹೇಳಿಕೆಯಿಂದ ಬೊಮ್ಮಾಯಿ ಅವರ ಗೌರವಕ್ಕೆ ಚ್ಯುತಿ ಬಂದಿದೆ. ಕಾರ್ಯಕರ್ತರು ಪ್ರಚೋದನೆಗೆ ಒಳಗಾಗುವ ಮತ್ತು ಕೆರಳುವ ಸಂಭವವಿದೆ. ಹೀಗಾಗಿ ಸುಜೇìವಾಲಾರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಿಯೋಗ ಒತ್ತಾಯಿಸಿದೆ.
ಅದೇ ರೀತಿ ತಿರುಪತಿ ತಿರುಮಲ ದೇಗುಲಕ್ಕೆ ಆರ್‌ಬಿಐ ದಂಡ ವಿಧಿಸಿದ ಪ್ರಕರಣವನ್ನು ಅನಗತ್ಯವಾಗಿ ಪ್ರಧಾನಿ ಅವರಿಗೆ ಥಳಕು ಹಾಕಿರುವ ಕಾಂಗ್ರೆಸ್ ನಾಯಕರ ವಿರುದ್ಧವೂ ಬಿಜೆಪಿ ದೂರು ನೀಡಿದೆ.
ಮೋದಿ ಅವರ ಬಿಜೆಪಿ ಸರ್ಕಾರ ತಿರುಪತಿ ಮೇಲೆ ದಾಳಿ ಮಾಡಿಸಿ 3.10 ಕೋಟಿ ದಂಡ ವಿಧಿಸಿದೆ ಎಂದು ಸುರ್ಜೇವಾಲಾ ಅವರು ಸುಳ್ಳು ಆರೋಪ ಮಾಡಿದ್ದಾರೆ. ಈ ಮೂಲಕ ಸರ್ಕಾರ, ಪಕ್ಷದ ವಿರುದ್ಧ ಜನತೆಯನ್ನು ಎತ್ತಿ ಕಟ್ಟುವ ಹುನ್ನಾರ ನಡೆಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಂಭವವಿದೆ ಎಂದು ಬಿಜೆಪಿ ಆರೋಪಿಸಿದೆ.