ಆಳಂದ: ರೈತರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪಿಎಂಜಿಎಸ್‌ವೈ ಅಧಿಕಾರಿಗಳು ಸುಳ್ಳು ಹೇಳಿ ಗ್ರಾಮಸ್ಥರ ನಡುವೆ ಕಲಹ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದರು.
ತಾಲೂಕಿನ ನಿಂಬರಗಾ ಬಟ್ಟರಗಾ, ಧಂಗಾಪುರ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿರುವ ರಸ್ತೆ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಯಾವ ರೈತರೂ ವಿರೋಧಿಸಿಲ್ಲ. ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರೇ ವಿರೋಧಿಸಿ ರಸ್ತೆ ತಡೆ, ಪ್ರತಿಭಟನೆ ಮಾಡಿದ್ದಾರೆ. ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಗ್ರಾಮಸ್ಥರ ನಡುವೆ ಪರಸ್ಪರ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿಂಬರ್ಗಾ-ಧಂಗಾಪುರ ನಡುವೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 5.01 ಕಿ.ಮೀ ರಸ್ತೆ ನಿರ್ಮಾಣಕ್ಕೆ 6.57 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 28 ಸೇತುವೆಗಳಲ್ಲಿ 13 ದೊಡ್ಡ ಸೇತುವೆ, 15 ಸಣ್ಣ ಸೇತುವೆ ನಿರ್ಮಾಣ ಮಾಡಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ 2 ದೊಡ್ಡ ಸೇತುವೆ, 7 ಚಿಕ್ಕ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಅಂದಾಜು ಮೊತ್ತ ಹಾಗೂ ಕಾಮಗಾರಿಯ ಯೋಜನೆ ತಯಾರಿಕೆ ಮಾಡಿದ ಅಧಿಕಾರಿಯೇ ಸುಳ್ಳು ಹೇಳುತ್ತಿರುವುದರಿಂದ ಜನರಿಗೆ ಅನುಮಾನ ಉಂಟಾಗಿದೆ. ಅಲ್ಲದೇ ರಸ್ತೆಯ ಎರಡು ಬದಿಯಲ್ಲಿ ಮೂರು ಅಡಿ ಮುರುಮ್ ಕೂಡಾ ಹಾಕಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ, ಚಂದ್ರಶೇಖರ ಶೆಗಜಿ, ಗ್ರಾಪಂ ಅಧ್ಯಕ್ಷೆ ಶಾರದಬಾಯಿ ದೇವೆಂದ್ರ ಮೇಲಕೇರಿ, ಶ್ರೀಮಂತ ವಾಗªರಗಿ, ಗುರು ಪಾಟೀಲ, ಗುರಣ್ಣಾ ಕಾಮಣಗೋಳ, ಈರಣ್ಣಾ ನಾಗಶೆಟ್ಟಿ, ಯಲ್ಲಾಲಿಂಗ ಚಿತ್ತಿಲಿ, ಸಿದ್ಧು ಕಲ್ಯಾಣ, ಆಲೂಗೌಡ ಪಾಟೀಲ, ಸೂರ್ಯಕಾಂತ ಚಿಂಚೂರೆ, ಭೀಮಣ್ಣಾ ಬನ್ನಪಟ್ಟಿ ಇತರರಿದ್ದರು.