ನವದೆಹಲಿ: ಚುನಾವಣಾ ಪ್ರಚಾರ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಅಧ್ಯಕ್ಷರಿಗೆ ಗುರುವಾರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಇಬ್ಬರ ಭಾಷಣದ ಕುರಿತು ಏ.29, ಬೆಳಗ್ಗೆ 11 ಗಂಟೆಯೊಳಗೆ ಉತ್ತರ ನೀಡಬೇಕೆಂದು ಸೂಚಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣೆ ಆಯೋಗ, ಪಕ್ಷದ ತಾರಾ ಪ್ರಚಾರಕರು ಪ್ರಚಾರದ ಅಬ್ಬರದಲ್ಲಿ ಕೆಲವೊಮ್ಮೆ ತೀರಾ ಕೆಳಮಟ್ಟಕ್ಕೆ ಇಳಿದಿರುವ ಉದಾಹರಣೆಗಳಿವೆ. ಉನ್ನತ ಸ್ಥಾನ ಹೊಂದಿರುವವರ ಭಾಷಣಗಳು ಗಂಭೀರ ಪರಿಣಾಮ ಹೊಂದಿರುತ್ತವೆ ಎಂದು ಹೇಳಿದೆ. ನೋಟಿಸ್ ಜೊತೆಗೆ ದೂರಿನ ಪ್ರತಿಗಳನ್ನೂ ಆಯೋಗ ಲಗತ್ತಿಸಿದೆ.
ಯಾವ ಕಾರಣಕ್ಕೆ ನೋಟಿಸ್?:
ಆಯೋಗ ಕಳಿಸಿರುವ ನೋಟಿಸ್‌ನಲ್ಲಿ, ಮೋದಿ ಮತ್ತು ರಾಹುಲ್ ವಿರುದ್ಧ ಇರುವ ದೂರುಗಳ ಪ್ರತಿಯೂ ಇದೆ. ಉತ್ತರಪ್ರದೇಶದ ಅಲಿಗಢದಲ್ಲಿ ಮಾತನಾಡಿದ್ದ ಮೋದಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಸಂಪತ್ತನ್ನು ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡುತ್ತದೆ. ತಾಯಂದಿರ ಮಂಗಳಸೂತ್ರವನ್ನೂ ಬಿಡುವುದಿಲ್ಲ. ನಿಮ್ಮ ಸಂಪತ್ತನ್ನು ನುಸುಳುಕೋರರಿಗೆ, ಹೆಚ್ಚು ಮಕ್ಕಳಿರುವ ವ್ಯಕ್ತಿಗಳಿಗೆ ಹಂಚುತ್ತದೆ’ ಎಂದಿದ್ದರು. ಇದರ ವಿರುದ್ಧ ಕಾಂಗ್ರೆಸ್ ದೂರು ನೀಡಿತ್ತು.
ಇನ್ನು ಕೇರಳದ ಕೊಟ್ಟಾಯಂನಲ್ಲಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದ ರಾಹುಲ್ ಗಾಂಧಿ, “ತಮಿಳುನಾಡು ಜನತೆಗೆ ತಮಿಳು ಮಾತನಾಡಬೇಡಿ, ಕೇರಳ ಜನತೆಗೆ ಮಲಯಾಳಂ ಮಾತನಾಡಬೇಡಿ ಎಂದು ಹೇಗೆ ಹೇಳುತ್ತೀರಿ? ಬಿಜೆಪಿ ಇದನ್ನು ಭಾಷೆ, ಪ್ರಾಂತ, ಜಾತಿ, ಧರ್ಮದ ಹೆಸರಿನಲ್ಲಿ ಮಾಡುತ್ತದೆ, ಅವರಿಗೆ ಯಾವಾಗೆಲ್ಲ ಅವಕಾಶ ಸಿಗುತ್ತದೋ, ಆಗ ದೇಶವನ್ನು ಒಡೆಯುತ್ತಾರೆ’ ಎಂದಿದ್ದರು. ಇದರ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು.
ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಕಳಿಸಿದ್ದೇಕೆ?:
ರಾಜಕೀಯ ಪಕ್ಷಗಳಿಗೆ ತಮ್ಮ ತಾರಾ ಪ್ರಚಾರಕರನ್ನು ನೇಮಿಸುವ, ಹಿಂಪಡೆಯುವ ಅಧಿಕಾರವಿರುತ್ತದೆ. ಪ್ರಚಾರಕರಿಗೆ ಜವಾಬ್ದಾರಿ ವಹಿಸುವ, ಅವರನ್ನು ನಿಯಂತ್ರಿಸುವ ಅಧಿಕಾರ ಪಕ್ಷಕ್ಕೆ ಇರುತ್ತದೆ. ಆದ್ದರಿಂದ ಪûಾಧ್ಯಕ್ಷರಿಗೆ ನೋಟಿಸ್ ನೀಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದೇ ಮೊದಲ ಬಾರಿಗೆ, ಪಕ್ಷದ ತಾರಾ ಪ್ರಚಾರಕರು ಮಾಡಿದ ತಪ್ಪಿಗೆ ಪಕ್ಷದ ಅಧ್ಯಕ್ಷರನ್ನು ಹೊಣೆಯಾಗಿಸಲಾಗಿದೆ. ತಮ್ಮ ತಮ್ಮ ಪಕ್ಷಗಳ ತಾರಾ ಪ್ರಚಾರಕರು ಭಾಷಣದ ವೇಳೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕಾದ್ದು ಅಧ್ಯಕ್ಷರ ಜವಾಬ್ದಾರಿಯಾಗಿರುತ್ತದೆ ಎನ್ನುವುದು ಆಯೋಗದ ವಾದ.