ಮುಂಬಯಿ: ಒಂದೊಮ್ಮೆ ಬಿಜೆಪಿಯ ಸಣ್ಣ ಮಿತ್ರಪಕ್ಷಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಮಲ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿದರೆ, ಅವುಗಳಿಗೆ ಇನ್ನಷ್ಟು ಉತ್ತಮ ಫಲಿತಾಂಶ ದೊರೆಯಲಿದೆ ಎಂದು ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತ ಚರ್ಚೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಮಹಾಜನ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಿವಸೇನೆಯ ಜತೆಗೆ ಬಿಜೆಪಿಯ ಇತರ ಮಿತ್ರಪಕ್ಷಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ ಬಣ), ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ), ರಯತ್ ಕ್ರಾಂತಿ ಸೇನಾ (ಆರ್‌ಕೆಎಸ್) ಮತ್ತು ಶಿವ ಸಂಗ್ರಾಮ್ ಒಳಗೊಂಡಿದೆ.
ಮೈತ್ರಿ ಪಕ್ಷಗಳು ಕಮಲ ಚಿಹ್ನೆಯ ಅಡಿ ಸ್ಪರ್ಧಿಸಿದರೆ, ಅವುಗಳಿಗೆ ಗೆಲುವಿನ ಉತ್ತಮ ಅವಕಾಶ ದೊರೆಯಬಹುದೆಂಬುದು ಬಿಜೆಪಿಯ ಅಭಿಪ್ರಾಯವಾಗಿದೆ ಎಂದು ಮಹಾಜನ್ ನುಡಿದಿದ್ದಾರೆ. ಆದಾಗ್ಯೂ, ಆರ್‌ಎಸ್‌ಪಿ ಮುಖ್ಯಸ್ಥ ಮಹಾದೇವ್ ಜಾನ್ಕರ್ ಅವರು ಇತ್ತೀಚೆಗೆ ತನ್ನ ಪಕ್ಷವು ಸ್ವಂತ ಚಿಹ್ನೆಯ ಮೇಲೆ ಸ್ಪರ್ಧಿಸಲು ಬಯಸುತ್ತದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕಂದಾಯ ಸಚಿವ ಮತ್ತು ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್ ಅವರು ವಿಧಾನಸಭೆಯ 288 ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನೆ ತಲಾ 135 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಅದೇ, ಉಳಿದ 18 ಸ್ಥಾನಗಳನ್ನು ಇತರ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಿವೆ ಎಂದು ಹೇಳಿದ್ದಾರೆ.
ಕೃಷಿ ರಾಜ್ಯ ಸಚಿವರಾಗಿರುವ ಆರ್‌ಕೆಎಸ್ ನಾಯಕ ಸದಾಭಾವು ಖೋತ್ ಅವರು ತನ್ನ ಪಕ್ಷದ ಅಭ್ಯರ್ಥಿಗಳು ಬಿಜೆಪಿಯ ಚಿಹ್ನೆಯ ಮೇಲೆ ಸ್ಪರ್ಧಿಸಲು ಬಯಸಿದ್ದಾರೆ ಎಂಬ ಸಂಕೇತ ನೀಡಿದ್ದಾರೆ ಎನ್ನಲಾಗಿದೆ.