Advertisement
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಮೂರು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಸ್ಥಾನಗಳಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವುದರಿಂದ ಮೂರೂ ಸ್ಥಾನಗಳು ಆಡಳಿತ ಪಕ್ಷಗಳಿಗೆ ದೊರೆತಿವೆ. ಹೀಗಾಗಿ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು, ಮೇಲ್ಮನೆ ಪ್ರವೇಶಿಸಲು ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಚುನಾವಣೆಯಲ್ಲಿ ಟಿಕೆಟ್ ವಂಚಿತರು ತಮ್ಮ ನಾಯಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.
Related Articles
Advertisement
ಹೀಗಾಗಿ ಆರು ಸ್ಥಾನಗಳಿಗೆ ಒಂದೇ ಸಮಯದಲ್ಲಿ ಮೇಲ್ಮನೆಗೆ ಪ್ರವೇಶಿಸುವ ಅವಕಾಶ ಇರುವುದರಿಂದ ಜೆಡಿಎಸ್ ಮೂರು ಸ್ಥಾನಗಳನ್ನು ತನ್ನ ಬಳಿ ಉಳಿಸಿಕೊಳ್ಳುವ ಲೆಕ್ಕಾಚಾರ ಹಾಕಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ನಾಲ್ಕು ಸ್ಥಾನಗಳು ತನ್ನ ಪಾಲಿಗೆ ಬರುತ್ತವೆ ಎಂಬ ಲೆಕ್ಕಾಚಾರದಲ್ಲಿದೆ. ಈ ಕುರಿತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಬಂದ ನಂತರ ಅಧಿಕೃತ ತೀರ್ಮಾನ ವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು:ಕೆಳಮನೆಯಿಂದ ಮೇಲ್ಮನೆಗೆ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹತ್ತಕ್ಕೂ ಹೆಚ್ಚು ಆಕಾಂಕಿಗಳಿದ್ದಾರೆ. ಮಾಜಿ ಸಚಿವರಾದ ರಾಣಿ ಸತೀಶ್, ಬಿ.ಕೆ. ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ನಿವೇದಿತ್ ಆಳ್ವಾ, ಪ್ರೊ.ಕೆ.ಇ.ರಾಧಾಕೃಷ್ಣ, ನಾಗರಾಜ್ ಯಾದವ್, ಶಫಿ ಅಹಮದ್, ಮಾಲೂರು ನಾರಾಯಣಸ್ವಾಮಿ, ಲಕ್ಷ್ಮೀ ನರಸಿಂಹಯ್ಯ, ಎಂ.ಸಿ. ವೇಣುಗೋಪಾಲ್, ಮೋಟಮ್ಮ ಪುತ್ರಿ ನಯನಾ ಮೋಟಮ್ಮ, ಡಾ. ಬಿ.ಎಸ್. ಶಿವಣ್ಣ ತಮ್ಮ ನಾಯಕರ ಮೂಲಕ ತೀವ್ರ ಲಾಬಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಈಗಾಗಲೇ ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವಾ ಅವರನ್ನ ಮೇಲ್ಮನೆಗೆ ಕಳುಹಿಸುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರೇ ಭರವಸೆ ಕೊಟ್ಟಿರುವ ಜಯನಗರ ಟಿಕೆಟ್ ತಪ್ಪಿರುವ ಎಂ.ಸಿ. ವೇಣುಗೋಪಾಲ್ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ. ರಾಣಿ ಸತೀಶ್ ಲಿಂಗಾಯತ ಕೋಟಾದಡಿ ಪ್ರಯತ್ನ ನಡೆಸಿದ್ದು, ನಾಗರಾಜ್ ಯಾದವ್, ಡಾ.ಬಿ.ಎಸ್. ಶಿವಣ್ಣ ಸಿದ್ದರಾಮಯ್ಯ ಅವರನ್ನು ನಂಬಿಕೊಂಡಿದ್ದಾರೆ. ಬಿ.ಕೆ. ಚಂದ್ರಶೇಖರ್, ವಿ.ಆರ್. ಸುದರ್ಶನ್ ಹಾಗೂ ಕೆ.ಇ. ರಾಧಾಕೃಷ್ಣ ಶಿಕ್ಷಣ ಹಾಗೂ ಸಮಾಜ ಸೇವೆ ಆಧಾರದಲ್ಲಿ ನಾಮ ನಿರ್ದೇಶನ ಮಾಡುವಂತೆಯೂ ಪಕ್ಷದ ನಾಯಕರಲ್ಲಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಾರಾಯಣಸ್ವಾಮಿ, ನಯನಾ ಮೋಟಮ್ಮ, ಲಕ್ಷ್ಮೀ ನರಸಿಂಹಯ್ಯ ಅವರು ದಲಿತರಿಂದ ಖಾಲಿಯಾಗಿರುವ ಸ್ಥಾನವನ್ನು ದಲಿತರಿಗೆ ನೀಡಬೇಕೆಂದು ದಲಿತ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್‌ನಲ್ಲಿಯೂ ಆಕ್ಷಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೂ ಮೇಲ್ಮನೆ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಧು ಬಂಗಾರಪ್ಪ, ಎನ್.ಎಚ್. ಕೋನರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಕಾಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ನಾರಾಯಣ ರಾವ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಮಧು ಬಂಗಾರಪ್ಪ ಸಿನೆಮಾ ರಂಗ ಹಾಗೂ ರಮೇಶ್ ಬಾಬು ಶಿಕ್ಷಣ ಕ್ಷೇತ್ರ ಹಾಗೂ ಸಮಾಜ ಸೇವೆ ಲೆಕ್ಕಾಚಾರದಲ್ಲಿ ನಾಮ ನಿರ್ದೇಶನಕ್ಕೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ. ನಾಮನಿರ್ದೇಶನಕ್ಕೆ ಜೆಡಿಎಸ್‌ನಿಂದ ಬುಡಕಟ್ಟು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಡಾ. ಎಚ್.ಸುದರ್ಶನ್, ಕಾಂಗ್ರೆಸ್‌ನಿಂದ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಹೆಸರುಗಳೂ ಕೇಳಿ ಬರುತ್ತಿವೆ. ಭಾನುವಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ವದೇಶಕ್ಕೆ ಮರಳಲಿದ್ದು, ಜೆಡಿಎಸ್ ನಾಯಕರ ಜೊತೆ ಸ್ಥಾನ ಹೊಂದಾಣಿಕೆ ಕುರಿತು ಚರ್ಚಿಸುವ ಸಾಧ್ಯತೆ ಇದೆ. ನಂತರ ವಿಧಾನ ಪರಿಷತ್ ಸದಸ್ಯರ ನೇಮಕ ಸೇರಿದಂತೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ಸೆಪ್ಟಂಬರ್ 18 ರಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ. – ಶಂಕರ ಪಾಗೋಜಿ