Advertisement

ಬೆಳಗಾವಿ ಗಡಿ ವಿವಾದ ಜಮ್ಮು-ಕಾಶ್ಮೀರಕ್ಕೆ ಹೋಲಿಕೆ

11:15 PM Jan 19, 2020 | Lakshmi GovindaRaj |

ಬೆಳಗಾವಿ: ಕನ್ನಡಿಗರ ವಿರುದ್ಧ ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಶಿವಸೇನೆ ನಾಯಕ ಸಂಜಯ ರಾವುತ್‌, ಕರ್ನಾಟಕ-ಮಹಾರಾಷ್ಟ್ರವನ್ನು ಗಡಿ ವಿವಾದವನ್ನು ಜಮ್ಮು-ಕಾಶ್ಮೀರಕ್ಕೆ ಹೋಲಿಸಿ ಉದ್ಧಟತನ ಮೆರೆದಿದ್ದಾರೆ. ಅಲ್ಲದೇ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ಕಾಯ್ದೆ ರದ್ದು ಮಾಡಲು ತೋರಿದ ದಿಟ್ಟತನವನ್ನು ಕೇಂದ್ರ ಗೃಹ ಸಚಿವ ಇಲ್ಲೂ ಪ್ರದರ್ಶಿಸಬೇಕೆಂದು ವಿವಾದ ಸೃಷ್ಟಿಸಿದ್ದಾರೆ.

Advertisement

ಕಳೆದ ಶುಕ್ರವಾರ ಬೆಳಗಾವಿಯಲ್ಲಿ ಎಂಇಎಸ್‌ ಆಯೋಜಿಸಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕದ್ದುಮುಚ್ಚಿ ಆಗಮಿಸಿದ್ದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ್‌ ಯಡ್ರಾವಕರ್‌ ಅವರನ್ನು ವಶಕ್ಕೆ ಪಡೆದು ಗಡಿ ದಾಟಿಸಿದ್ದ ರಾಜ್ಯ ಪೊಲೀಸರ ವಿರುದ್ಧ ಕಿಡಿಕಾರಿದ್ದ ಸಂಜಯ ರಾವುತ್‌, ನಾನೇ ಬೆಳಗಾವಿಗೆ ಬರುತ್ತೇನೆ’ ಎಂದು ಸವಾಲು ಹಾಕಿದ್ದರು. ಶನಿವಾರ ಬೆಳಗಾವಿಗೆ ಆಗಮಿಸಿದ್ದ ರಾವುತ್‌, ಸಭೆಯಲ್ಲಿ ಭಾಗವಹಿಸಿದ್ದರೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಿದ್ದರು.

ಆದರೆ, ಭಾನುವಾರ ವಾಪಸ್‌ ತೆರಳುವ ವೇಳೆ ಮಾತನಾಡಿ, ಜಮ್ಮು-ಕಾಶ್ಮೀರದ 370 ಕಾಯ್ದೆ ರದ್ದುಪಡಿಸುವ ಮೂಲಕ ಅಮಿತ್‌ ಶಾ ದಿಟ್ಟತನ ಮೆರೆದಿದ್ದಾರೆ. ಅದೇ ರೀತಿ 70 ವರ್ಷ ಗಳಷ್ಟು ದೀರ್ಘ‌ ಸಮಸ್ಯೆ ಇರುವ ಬೆಳಗಾವಿಯ ಗಡಿ ವಿಷಯವನ್ನೂ ತ್ವರಿತವಾಗಿ ಬಗೆಹರಿಸುವತ್ತ ಶಾ ಹೆಜ್ಜೆ ಇಡಲಿ ಎಂದು ಆಗ್ರಹಿಸಿದ್ದಾರೆ. ಕೂಡಲೇ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಹಾಗೂ ಕರ್ನಾಟಕ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿ ಇಂಥ ಘಟನೆಗಳು ಮರುಕಳಿಸದಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಕನ್ನಡ ನಾಮಫಲಕ ಇವೆಯೇ?: ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ನಮ್ಮ ಮೇಲೆ ದಬ್ಟಾಳಿಕೆ ನಡೆಸುತ್ತಿದೆ. ಮರಾಠಿಯಲ್ಲಿ ನಾಮಫಲಕ ಅಳವಡಿಸಿದರೆ ಪರವಾನಗಿ ರದ್ದುಪಡಿಸುತ್ತಿದೆ. ಕನ್ನಡ ಫಲಕ ಅಳವಡಿಸುವಂತೆ ಒತ್ತಡ ಹೇರುತ್ತಿದೆ ಎಂದು ಎಂಇಎಸ್‌ ಯುವ ಘಟಕ ಕಾರ್ಯ ಕರ್ತರು, ಶಿವಸೇನೆ ವಕ್ತಾರ ಸಂಜಯ ರಾವುತ್‌ ಅವರನ್ನು ಭೇಟಿಯಾಗಿ ನೋವು ತೋಡಿಕೊಂಡರು.

ಆಗ ಇದಕ್ಕೆ ಉತ್ತರಿಸಿದ ರಾವುತ್‌, ಮಹಾರಾಷ್ಟ್ರದಲ್ಲಿಯೂ ಕನ್ನಡ ನಾಮಫಲಕಗಳಿವೆಯೇ ಎಂದು ತಮ್ಮೊಂದಿಗೆ ಇದ್ದವರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಬಲಿಗರು, ನಮ್ಮಲ್ಲಿರುವ ನಾಮಫಲಕಗಳಲ್ಲಿ ಮರಾಠಿ, ಕನ್ನಡ, ಹಿಂದಿ ಭಾಷೆಗೆ ಅವಕಾಶ ಇದೆ. ಆದರೆ ಕರ್ನಾಟಕದಲ್ಲಿ ಕೇವಲ ಕನ್ನಡ ಮಾತ್ರ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ ಎಂದರು.

Advertisement

ಟ್ವೀಟ್‌ನಲ್ಲೇ ಮಹಾ ಬಿಜೆಪಿ ಏಟು: ಸಂಜಯ ರಾವುತ್‌ ಗಡಿ ವಿಷಯದಲ್ಲಿ ವೀರಾವೇಶದ ಮಾತುಗಳನ್ನಾಡಿದ್ದಕ್ಕೆ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕರು ಕಾಲೆಳೆದಿದ್ದಾರೆ. ಕನ್ನಡ-ಮರಾಠಿಗರು ಸಹೋದರರು ಇದ್ದಂತೆ. ತೀರ್ಪು ಬರುವವರೆಗೆ ಸುಮ್ಮನಿರಬೇಕು ಎಂದಿರುವ ರಾವುತ್‌ಗೆ ಬಿಜೆಪಿ ಯುವನಾಯಕ ನಿಲೇಶ ರಾಣೆ ಟ್ವೀಟ್‌ ಮಾಡಿದ್ದಾರೆ.

ಜಮ್ಮು-ಕಾಶ್ಮೀರ ಸಮಸ್ಯೆ ಕ್ಷಣಾರ್ಧದಲ್ಲಿ ಬಗೆಹರಿಸುವ ಸಾಹಸ ಮಾಡಿರು ವವರ ಮುಂದೆ ಮರಾಠಿ, ಭಾಷೆ- ಸಂಸ್ಕೃತಿಗಾಗಿ ನಡೆಯುತ್ತಿರುವ ಈ ಗಡಿ ಸಮಸ್ಯೆ ಇತ್ಯರ್ಥ ಪಡಿಸುವುದು ಕಷ್ಟದ ಕೆಲಸವಲ್ಲ. ಇದು ಕೂಡ ಜಮ್ಮು-ಕಾಶ್ಮೀರದಷ್ಟೇ ಕ್ಲಿಷ್ಟಕರವಾಗಿದೆ. ಹೀಗಾಗಿ ಅಮಿತ್‌ ಶಾ ಮಧ್ಯಪ್ರವೇಶಿಸಿ ಇದನ್ನು ಬಗೆಹರಿಸಬೇಕು.
-ಸಂಜಯ ರಾವುತ್‌, ಶಿವಸೇನೆ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next