Advertisement

ಸಮುದಾಯದ ಗೆಲುವು ಮುಖ್ಯ: ಜಗದೀಶ್ ಶೆಟ್ಟರ್

09:40 AM May 06, 2023 | Team Udayavani |

ಹುಬ್ಬಳ್ಳಿ: ಬಿಜೆಪಿಯವರು ನಾನು ಪಕ್ಷಕ್ಕೆ ದ್ರೋಹ ಎಸಗಿದೆ ಎನ್ನುತ್ತಾರೆ. ಕಾಂಗ್ರೆಸ್‌ನ 15 ಮತ್ತು ಜೆಡಿಎಸ್‌ನ ಇಬ್ಬರು ಶಾಸಕರನ್ನು ಆಪರೇಶನ್‌ ಕಮಲ ಮೂಲಕ ಬರಮಾಡಿಕೊಂಡು ಸರ್ಕಾರ ರಚಿಸುವಾಗ ಇವರ ತತ್ವ-ಸಿದ್ಧಾಂತ ಎಲ್ಲಿಗೆ ಹೋಗಿತ್ತು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರಶ್ನಿಸಿದರು.

Advertisement

ವಿದ್ಯಾನಗರ ಲಿಂಗರಾಜನಗರದ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ
ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ತತ್ವ, ಸಿದ್ಧಾಂತ, ಪ್ರಾಮಾಣಿಕತೆ, ಸತ್ಯ, ಸ್ವಾತಿಕತೆ ಎಂಬುದು ಎಲ್ಲಿದೆ. ಶೆಟ್ಟರ ಸೇರಿದಂತೆ ಬೇರೆಯವರಿಗೆ ಮಾತ್ರ ಇವೆಲ್ಲವು
ಅನ್ವಯಿಸುತ್ತವೆ. ತಮಗೆ ಬೇಕಾದವರಿಗೆ ಅದಕ್ಕೆ ವ್ಯತಿರಿಕ್ತವಾದ ಕೆಲಸ ಮಾಡುತ್ತಾರೆ. ಸಮಾಜದ ಜನತೆಯ ಸ್ವಾಭಿಮಾನಕ್ಕೆ ಪೆಟ್ಟಾದ ಮೇಲೂ ಆ ಅಪಮಾನ ತಡೆದುಕೊಂಡು ಸುಮ್ಮನೆ ಅಲ್ಲಿದ್ದರೆ ಪಲಾಯನವಾದ, ಗುಲಾಮಗಿರಿ, ಜಿ ಹುಜೂರ್‌ಗೆ ಬಗ್ಗಬೇಕಾಗಿತ್ತು. ಅದಕ್ಕೆ ವಿರೋಧಿಸಿ, ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು ಬಿ.ಎಲ್‌. ಸಂತೋಷ ಎಂಬ ವ್ಯಕ್ತಿ. ಇಡೀ ವ್ಯವಸ್ಥೆ ಹಾಳು ಮಾಡಲು, ಕಟ್ಟಿಬೆಳೆಸಿದ ಬಿಜೆಪಿಯ ತಳಪಾಯ ಕಣ್ಮುಂದೆಯೇ ಕುಸಿದು ಹೋಗುತ್ತಿರುವುದಕ್ಕೆ ವೇದನೆಯಾಗುತ್ತಿದೆ. ಇಂತಹ ವ್ಯಕ್ತಿಗೆ ಬಿಜೆಪಿ ಹೈಕಮಾಂಡ್‌ ಮಣೆ ಹಾಕುತ್ತಿರುವುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲೂ ಬಿಜೆಪಿ ಮುಗಿಸಲು ಇಂಥವರನ್ನು ಕಳುಹಿಸಿರಬಹುದು. ವೈಯಕ್ತಿಕವಾಗಿ ಶೆಟ್ಟರ ಗೆಲ್ಲುವುದಕ್ಕಿಂತ ಇಡೀ ಸಮುದಾಯ ಮತ್ತು ಜನತೆ ಸವಾಲಾಗಿ ಸ್ವೀಕರಿಸಿ ದುರಹಂಕಾರಿ ಪಕ್ಷಕ್ಕೆ ಪಾಠ ಕಲಿಸಿ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಒಂದು ಕಾಲದಲ್ಲಿ ವೀರಶೈವ ಲಿಂಗಾಯತರೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಅವರೇ ಮುಖ್ಯಮಂತ್ರಿ ಆಯ್ಕೆ
ಮಾಡುತ್ತಿದ್ದರು. ಆದರೆ ಇಂದು ಕೆಲವರು ಈ ಹಿಡಿತ ಸಾಧಿಸುತ್ತಿದ್ದಾರೆ. ಒಗ್ಗಟ್ಟು, ಸಂಘಟನೆ ಮಾಡುವುದು ಅನಿವಾರ್ಯ. ಸಮಾಜದ ಹಿತ, ಭವಿಷ್ಯ ಮತ್ತು ಸ್ವಾಭಿಮಾನಕ್ಕಾಗಿ ಪಕ್ಷಾತೀತವಾಗಿ ಒಂದಾಗಲೇಬೇಕಿದೆ ಎಂದರು.

ನನಗೆ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸ್ಥಾನ ಬೇಕಿಲ್ಲ. ನನ್ನ ಮನಸ್ಸಿಗೆ ನೋವಾಗಿದೆ. ನನಗೆ ಸಾಕಾಗಿದೆ.
ಮಾಜಿ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಇದೆ. ಅಷ್ಟೇ ಸಾಕು. ಕಾಂಗ್ರೆಸ್‌ನಲ್ಲಿ ಹಲವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ಪಕ್ಷದ ಹೈಕಮಾಂಡ್‌ ಯಾರನ್ನು ಸಿಎಂ ಮಾಡುತ್ತದೆ ಅವರೊಂದಿಗೆ ಕೆಲಸ ಮಾಡುವೆ. ನನ್ನ ಕಡೆಯ ಐದು ವರ್ಷಗಳ ಅವಧಿಯಲ್ಲಿ ಮಹಾನಗರವನ್ನು ಸುಂದರ ನಗರವನ್ನಾಗಿಸುವ ಕನಸು ಇದೆ. ಅದನ್ನು
ನನಸು ಮಾಡುವೆ.
-ಜಗದೀಶ ಶೆಟ್ಟರ, ಮಾಜಿ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next