Advertisement

ಗಡಿಯಲ್ಲಿ ಭಾರತ-ಚೀನ ಶಾಂತಿಗೆ ಬದ್ಧ

01:38 AM Jun 08, 2020 | Sriram |

ಹೊಸದಿಲ್ಲಿ: ಭಾರತ- ಚೀನ ಗಡಿ ಮುನಿಸು ತಣ್ಣಗಾಗುವ ದಿನಗಳು ಬಂದಿವೆ. ಎರಡೂ ದೇಶಗಳು ಈ ಹಿಂದಿನ ದ್ವಿಪಕ್ಷೀಯ ಒಪ್ಪಂದಗಳ ಅನ್ವಯ ಗಡಿ ಬಿಕ್ಕಟ್ಟನ್ನು ಬಗೆ ಹರಿಸಿ ಕೊಳ್ಳಲು ತೀರ್ಮಾನಿಸಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ರವಿವಾರ ತಿಳಿಸಿದೆ.

Advertisement

ಲಡಾಖ್‌ನ ಚುಶುಲ್‌- ಮೊಲ್ಡಾದ ಬಿಪಿಎಂ ಪಾಯಿಂಟ್‌ನಲ್ಲಿ ಸಕಾರಾತ್ಮಕವಾಗಿ ಸಭೆ ಅಂತ್ಯ ಕಂಡಿದೆ. ಭಾರತ-ಚೀನ ಗಡಿಯಲ್ಲಿ ಶಾಂತಿ ಅಗತ್ಯ ಎಂಬುದನ್ನು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಂದಿನ ಚರ್ಚೆಗಳು ನಡೆಯಲಿವೆ ಎಂದು ಸಚಿವಾಲಯ ಹೇಳಿದೆ.

ಎಲ್‌ಎಸಿ ಬಗ್ಗೆಯೇ ಆಕ್ಷೇಪ
ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಎಂದು ಕರೆಯಲ್ಪಡುವ ಭಾರತ-ಚೀನ ನಡುವಿನ ವಿವಾದಿತ ಗಡಿಯನ್ನು ಪಶ್ಚಿಮ, ಮಧ್ಯ ಮತ್ತು ಪೂರ್ವ ಎಂಬ 3 ಭಾಗಗಳಾಗಿ ವಿಂಗಡಿಸಲಾಗಿದೆ. ಎಲ್‌ಎಸಿಯ ನಿಖರವಾದ ವ್ಯಾಪ್ತಿಯ ಬಗ್ಗೆ ಎರಡೂ ದೇಶಗಳು ಭಿನ್ನಾಭಿಪ್ರಾಯ ಹೊಂದಿವೆ. ಅದು 3,348 ಕಿ.ಮೀ. ಉದ್ದವಿದೆ ಎಂದು ಭಾರತ ಹೇಳಿದರೆ, 2 ಸಾವಿರ ಕಿ.ಮೀ. ಮಾತ್ರ ಇದೆ ಎಂಬುದು ಚೀನದ ವಾದ. ಗಡಿ ಉದ್ವಿಗ್ನಕ್ಕೆ ಇದೇ ಕಾರಣ ಎಂದು ಸಭೆಯಲ್ಲಿ ತಿಳಿದುಬಂದಿದೆ.

ಭಾರತ-ಚೀನ ರಾಜತಾಂತ್ರಿಕ ಸಂಬಂಧ ಏರ್ಪಟ್ಟು 70 ವರ್ಷಗಳು ತುಂಬುತ್ತಿವೆ. ಈ ಹಿಂದೆ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಆಗಿರುವ ತೀರ್ಮಾನಗಳನ್ನು ಗೌರವಿಸಿ, ಭಿನ್ನಾಭಿ ಪ್ರಾಯ ಗಳನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳು ಬದ್ಧವಾಗಿವೆ ಎಂದು ಸಚಿವಾಲಯ ತಿಳಿಸಿದೆ.

“ಬಾಯ್ಕಟ್‌ ಚೀನ’, ಸರಕಾರದ ಘೋಷಣೆ ಅಲ್ಲ
ಚೀನೀ ವಸ್ತುಗಳ ಬಹಿಷ್ಕಾರ (ಬಾಯ್ಕಟ್‌ ಚೀನ) ಅಭಿಯಾನ ಜನಪ್ರಿಯ ಭಾವನೆಯೇ ವಿನಾ ಸರಕಾರದ ಘೋಷಣೆ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಸ್ಪಷ್ಟಪಡಿಸಿದ್ದಾರೆ. “ಬಾಯ್ಕಟ್‌ ಚೀನ’ ಭಾರತೀಯರು ಹುಟ್ಟುಹಾಕಿರುವ ಜನಪ್ರಿಯ ಭಾವನೆ. ಈ ಬಗ್ಗೆ ಕೇಂದ್ರ ಸರಕಾರ ಘೋಷಣೆ ಹೊರಡಿ ಸಿಲ್ಲ. “ಮೇಡ್‌ ಇನ್‌ ಚೀನ’ ಉತ್ಪನ್ನಗಳನ್ನು ಜನ ತಾವಾಗಿಯೇ ಬಹಿಷ್ಕರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಚೀನ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪೂರ್ವ ಲಡಾಖ್‌ನಲ್ಲಿನ ಅದರ ವರ್ತನೆಯೂ ಈ ಆಕ್ರೋಶ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

Advertisement

ಭಾರತವು ಯಾವುದೇ ರಾಷ್ಟ್ರದ ಮುಂದೆ ತಲೆಬಾಗುವುದಿಲ್ಲ. ಚೀನದೊಂದಿಗಿನ ಗಡಿ ಬಿಕ್ಕಟ್ಟನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳುತ್ತಿದ್ದೇವೆ.
– ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next