ಬೆಂಗಳೂರು: ನಗರದಲ್ಲಿ ನಿತ್ಯ ಕನಿಷ್ಠ 10ಸಾವಿರ ಜನರಿಗೆ ಕೋವಿಡ್ ಸೋಂಕು ಪರೀಕ್ಷೆ ಮಾಡುವಂತೆ ಬಿಬಿಎಂಪಿ ಕೋವಿಡ್ ಕಾರ್ಯಪಡೆ ಸಲಹೆ ನೀಡಿದೆ ಎಂದು ಬಿಬಿ ಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ ಕಾರ್ಯಪಡೆ ಮಾದರಿಯಲ್ಲೇ ಬೆಂಗಳೂರಿಗೆ ಬಿಬಿಎಂಪಿ ಕೋವಿಡ್ ಕಾರ್ಯಪಡೆಯನ್ನು ರಚನೆ ಮಾಡಲಾಗಿದ್ದು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹಾಗೂ ಮೇಯರ್ ಎಂ.ಗೌತಮ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯ ಪಡೆಯ ಮೊದಲ ಸಭೆ ಮಂಗಳವಾರ ನಡೆದಿದೆ. ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ಆಯುಕ್ತರು, ನಗರದಲ್ಲಿ ಕನಿಷ್ಠ 10 ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಹಾಗೂ ವ್ಯಾಪಕವಾಗಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಸಾರ್ವಜನಿಕ ಭೀತಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಿ ಧನಾತ್ಮಕ ಚಿಂತನೆ ಮೂಡಿಸುವಂತೆ ಸಲಹೆ ನೀಡಲಾಗಿದೆ ಎಂದರು.
ಇನ್ನು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದ ಸೋಂಕಿನ ವರದಿಯನ್ನು ತ್ವರಿತವಾಗಿ ಐಸಿಎಂಆರ್ ಪೋಟಲ್‌ಗೆ ಅಪ್‌ಡೇಟ್ ಮಾಡುವಂತೆ ತಿಳಿಸಿದ್ದಾರೆ. ಸೋಂಕಿತರು ಪತ್ತೆಯಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು, ಸಂಪರ್ಕಿತರ ಕ್ವಾರಂಟೈನ್ ಮಾಡಲು, ಸ್ವಾಬ್ ಸಂಗ್ರಹಿಸುವುದಕ್ಕೆ ಸಿಬ್ಬಂದಿ ಕೊರತೆ ಸರಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಇದರಂತೆ ಪ್ರತಿ ವಾರ್ಡ್ ಗೆ 25 ಸಿಬ್ಬಂದಿಯ ಅವಶ್ಯಕತೆ ಇದೆ. ಈ ಮೂಲಕ ಸದ್ಯ ಬಿಬಿಎಂಪಿಗೆ 4,500 ಮಂದಿ ಸಿಬ್ಬಂದಿ ತ್ವರಿತವಾಗಿ ಬೇಕಾಗಿದೆ. ಹೀಗಾಗಿ, ನರ್ಸಿಂಗ್, ಪ್ಯಾರಾಮೆಡಿಕಲ್ ಮಂಡಳಿಯಿಂದ ಸಿಬ್ಬಂದಿ ಪಡೆಯಬೇಕು, ಪದವಿ ಮುಗಿಸದ (ಅಂತಿಮ ವರ್ಷದ) ವಿದ್ಯಾರ್ಥಿಗಳು ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ನಗರದಲ್ಲಿ ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆ ಮಾಡಿದ ವರದಿಗಳನ್ನು ತ್ವರಿತವಾಗಿ ಐಸಿಎಂಆರ್ ಪೋರ್ಟಲ್‌ಗೆ ಅಪ್ ಡೇಟ್ ಮಾಡುವಂತೆ ಸೂಚಿಸಿದ್ದು, ಈ ಅಂಶಗಳ ಮೇಲೆ ಯೋಜನೆ ರೂಪಿಸಲಾಗುವುದು ಎಂದರು.
ಸ್ವಯಂ ಹೋಂ ಕ್ವಾರಂಟೈನ್‌ಗೆ : ಕೋವಿಡ್ ಸೋಂಕಿನ ಲಕ್ಷಣಗಳು ಐದನೇ ದಿನ ಕಾಣಿಸಿಕೊಳ್ಳುತ್ತದೆ. ನಾಲ್ಕನೇ ದಿನ ಸೋಂಕು ಪರೀಕ್ಷೆಗೆ ಒಳಪಟ್ಟರೆ ಸೋಂಕು ದೃಢಪಡುವುದಿಲ್ಲ.ಇದಾದ ಮೇಲೆ ಮತ್ತೂಮ್ಮೆ ಸೋಂಕು ಪರೀಕ್ಷೆಗೆ ಒಳಪಡುವ ವೇಳೆಗೆ ಸೋಂಕಿತರು ಇತರರಿಗೂ ಸೋಂಕು ಹಬ್ಬಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸೋಂಕು ಪರೀಕ್ಷೆ ವರದಿ ಬರುವವರೆಗೆ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಾರ್ವಜನಿಕರಲ್ಲಿ ಸೋಂಕು ಪರೀಕ್ಷೆ ವರದಿ ಬರುವವರೆಗೆ ಹೋಂಕ್ವಾರಂಟೈನ್ ಆಗಿ ಎಂದು ಮನವಿ ಮಾಡಿದರು.