ಮೈಸೂರು: ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸರ್ಕಾರ ವರುಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ವರುಣ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.
ವರುಣ ಕ್ಷೇತ್ರದ ಆಲಂಬೂರು, ಆಲಂಬೂರು ಮಂಟಿ, ಮಲ್ಲುಪುರ, ಕಿರುಗುಂದ, ಸೋನಹಳ್ಳಿ, ಮಡಹಳ್ಳಿ, ಅಳಗಂಚಿ, ಅಳಗಂಚಿಪುರ ಗ್ರಾಮಗಳಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಆಲಂಬೂರು ಗ್ರಾಮದ ರಸ್ತೆ ಅಭಿವೃದ್ಧಿಗೆ 1.15 ಕೋಟಿ ರೂ. ಬಿಡುಗಡೆಯಾಗಿ ಕೆಲಸ ಮುಗಿದಿದೆ. ಸಮುದಾಯ ಭವನಕ್ಕೆ 15 ಲಕ್ಷ ರೂ.ಬಿಡುಗಡೆಯಾಗಿದೆ, ಬಸವೇಶ್ವರ ದೇವಸ್ಥಾನಕ್ಕೆ 1.5 ಲಕ್ಷ ರೂ., ಗರಡಿಮನೆಗೆ 8 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿದ ಕಾಮಗಾರಿಗಳನ್ನು ಮಾಡಿಕೊಡಲಾಗುವುದು ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ ರಾಜ್ಯದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.
ಅನ್ನಭಾಗ್ಯ, ಕ್ಷೀರಭಾಗ್ಯ, ನೀರಾವರಿ ಯೋಜನೆಗಳು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ಬಡ್ಡಿರಹಿತಸಾಲ, ವಿದ್ಯಾಸಿರಿ, ಪರಿಶಿಷ್ಟಜಾತಿ ಪಂಗಡದವರ ಅಭಿವೃದ್ಧಿಗೆ 60 ಸಾವಿರ ಕೋಟಿ ಮೀಸಲು, ವಸತಿ ಶಾಲೆಗಳು, ವೈದ್ಯಕೀಯ ಕಾಲೇಜುಗಳು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮುಖ್ಯಮಂತ್ರಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಆಲಂಬೂರು ಹೊಸ ಬಡಾವಣೆಗೆ ವಿದ್ಯುತ್ ಕಂಬ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ವರುಣ ಕ್ಷೇತ್ರದಲ್ಲಿ ಈಗಾಗಲೇ ಶೇ.90 ರಷ್ಟು ಅಭಿವೃದ್ಧಿ ಕಾಮಗಾರಿಗಳು ಮುಗಿದಿದ್ದು ಉಳಿದ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾಡಿಕೊಡಲಾಗುವುದು ಎಂದರು.
ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್, ತಾಪಂ ಉಪಾಧ್ಯಕ್ಷ ಗೋವಿಂದರಾಜು, ಮಾಲೇಗೌಡ, ಕಲ್ಲಳ್ಳಿಬಾಬು, ಮರಳೂರು ಮಹೇಶ, ಧರ್ಮೇಂದ್ರ, ರಂಗಸ್ವಾಮಿ, ಗ್ರಾಪಂ ಅಧ್ಯಕ್ಷೆ ಜ್ಯೋತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ, ತಹಶೀಲ್ದಾರ್ ದಯಾನಂದ್, ಕಲಾವತಿ, ಶ್ರೀನಿವಾಸ್ ಹಾಜರಿದ್ದರು.