Advertisement

Government ಠೇವಣಿದಾರರ ಹಿತ ಕಾಯಲು ಬದ್ಧ: ರಾಜಣ್ಣ

10:02 PM Oct 09, 2023 | Team Udayavani |

ಬೆಂಗಳೂರು: ಸಹಕಾರ ಸಂಘಗಳು ಹಾಗೂ ಠೇವಣಿದಾರರ ರಕ್ಷಣೆಗಾಗಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ರಚಿಸಿರುವ ಸಮಿತಿಯು ತಿಂಗಳಲ್ಲಿ ತನ್ನ ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

Advertisement

ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಸಾವಿರಾರು ಸಹಕಾರ ಸಂಘಗಳಿದ್ದು, ಕೆಲವು ಚೆನ್ನಾಗಿಯೇ ನಡೆಯುತ್ತಿವೆ. ಆದರೆ, ಕೆಲವು ಸಂಘಗಳ ಮೇಲೆ ಆರೋಪಗಳಿದ್ದು, ಠೇವಣಿದಾರರ ಹಿತ ಕಾಪಾಡಲು ಸರಕಾರ ಬದ್ಧವಾಗಿದೆ ಎಂದರು.

ಕೆಲವು ಸಹಕಾರ ಸಂಘಗಳ ಪ್ರಕರಣಗಳಲ್ಲಿ ನ್ಯಾಯಾಲಯ ಹಾಗೂ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಇಲಾಖೆಯಿಂದ ತನಿಖೆಗಳು ನಡೆಯುತ್ತಿವೆ. ಹೀಗಾಗಿ ಯಾವ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಸೂಚಿಸಲು ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಜಿ.ಟಿ. ದೇವೇಗೌಡ, ಎಸ್‌.ಆರ್‌. ಪಾಟೀಲ್‌ ಸಹಿತ ಸಹಕಾರ ಕ್ಷೇತ್ರದ ಅನುಭವಿಗಳು ಸಮಿತಿಯಲ್ಲಿದ್ದಾರೆ.

ಮುಂದಿನ 1 ತಿಂಗಳೊಳಗಾಗಿ ಈ ಸಮಿತಿಯ ವರದಿ ಬರಲಿದ್ದು, ಅದರಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಹಕಾರ ಸಂಘಗಳು ಮತ್ತು ಠೇವಣಿದಾರರ ಹಿತ ಕಾಯಲಾಗುವುದು ಎಂದು ಭರವಸೆ ನೀಡಿದರು.

ಡಿಜಿಟಲೀಕರಣದಿಂದ ಅಕ್ರಮಕ್ಕೆ ಬ್ರೇಕ್‌
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳನ್ನು ಡಿಜಿಟಲೀಕರಣ ಮಾಡುವುದಾಗಿ ಕೇಂದ್ರ ಸರಕಾರ ಘೋಷಿಸಿದ್ದು, ಕೇಂದ್ರದಿಂದ ಇದಕ್ಕಾಗಿ ಸಿಗಲಿರುವ ಅನುದಾನ ಅನುಸರಿಸಿ ರಾಜ್ಯದಲ್ಲೂ ಡಿಜಿಟಲೀಕರಣ ಮಾಡಲಾಗುತ್ತದೆ. ಇದಲ್ಲದೆ, ಸಹಕಾರ ಇಲಾಖೆಯನ್ನೂ ಡಿಜಿಟಲೀಕರಣ ಮಾಡುವ ನಿರ್ಧಾರವಾಗಿದ್ದು, ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಇದರಿಂದ ಸಹಕಾರ ಸಂಘಗಳಲ್ಲಿ ಅಕ್ರಮಕ್ಕೆ ಬ್ರೇಕ್‌ ಬೀಳಲಿದ್ದು, ಪಾರದರ್ಶಕತೆ ಬರಲು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸಹಕಾರಿ ವ್ಯಾಜ್ಯಗಳಿಗೆ ಪ್ರತ್ಯೇಕ ನ್ಯಾಯಾಲಯ
ಲಕ್ಷ್ಮಣ ಸವದಿ ನೇತೃತ್ವದ ಸಮಿತಿಯು ಕೃಷಿಯೇತರ ಪತ್ತಿನ ವಿವಿಧೋದ್ದೇಶಗಳ ಸಹಕಾರಿ ಸಂಘಗಳ ಉಳಿವಿಗೆ ಕಾನೂನಿನಲ್ಲಿ ಸಾಕಷ್ಟು ತಿದ್ದುಪಡಿ ಆಗಬೇಕಿದೆ ಎಂದು ಹಿಂದೆಯೇ ಅಭಿಪ್ರಾಯಪಟ್ಟಿತ್ತು. ಸಹಕಾರ ಕ್ಷೇತ್ರದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಕಂದಾಯ ವಿಭಾಗಕ್ಕೊಂದು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವುದು ಒಳಿತು ಎಂದು ಅಭಿಪ್ರಾಯಪಟ್ಟಿತ್ತು. ಠೇವಣಿದಾರರ ಹಿತ ಕಾಯಲು ಸಹಕಾರ ಸಂಘಗಳಲ್ಲೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಮಾದರಿಯಲ್ಲಿ ವಿಮಾ ಯೋಜನೆ ಜಾರಿಗೊಳಿಸಬೇಕು, ಸಹಕಾರ ಇಲಾಖೆ ವ್ಯಾಪ್ತಿಗೆ ಸಹಕಾರ ಸಂಘಗಳನ್ನು ತರುವ ಮೂಲಕ ನಿಯಂತ್ರಣ ಸಾಧಿಸಬೇಕೆಂಬ ಚರ್ಚೆಗಳೂ ಸಮಿತಿಯಲ್ಲಿ ನಡೆದಿದ್ದವು. ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಅಧಿವೇಶನದ ಒಳಗಾಗಿಯೇ ಸಮಿತಿಯ ವರದಿ ಸಲ್ಲಿಕೆಯಾಗಲಿದ್ದು, ತಿದ್ದುಪಡಿ ಮಸೂದೆಯೂ ಮಂಡನೆಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next