Advertisement

ಪಂಚಮಸಾಲಿ ಸಮಾಜಕ್ಕೆ ಮೀಸಲು ಕೊಡಿಸಲು ಬದ್ಧ: ಸಿಎಂ ಬೊಮ್ಮಾಯಿ

09:51 PM Jan 14, 2023 | Team Udayavani |

ದಾವಣಗೆರೆ: ಸಮಾಜದ ಇತರೆ ಸಮುದಾಯಗಳಿಗೆ ಅನ್ಯಾಯವಾಗದಂತೆ ಕಾನೂನು ಚೌಕಟ್ಟಿನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಶಾಶ್ವತವಾಗಿ ಸಾಮಾಜಿಕ ನ್ಯಾಯ ಕೊಡಿಸಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರ ಹರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ “ರೈತ ರತ್ನ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರ ಸರಿಯಾದ ದಾರಿಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಎರಡನೇ ಹೆಜ್ಜೆ ಇಡಲು ಸಿದ್ಧತೆ ಸಹ ನಡೆಸಿದೆ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯಬೇಕಿದೆ. ಗುಜರಾತ್‌, ಮಹಾರಾಷ್ಟ್ರ, ಹರಿಯಾಣ ಎಲ್ಲ ಕಡೆ ಮೀಸಲಾತಿ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗಿ ಬಿದ್ದು ಹೋಗಿವೆ. ಇಲ್ಲಿ ನಾವೂ ಅವಸರ ಮಾಡಿದರೆ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಬಡವರಿಗೆ ಅನ್ಯಾಯವಾಗಲಿದೆ ಎಂದರು.

ಪಂಚಮಸಾಲಿಗಳಿಗೆ ಸಿಗಬೇಕಾದ ಮೀಸಲಾತಿ ಪಾಲನ್ನು ನ್ಯಾಯಬದ್ಧವಾಗಿ ಕೊಡುತ್ತೇವೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ದಿಟ್ಟ ಹೆಜ್ಜೆ ಇಡುತ್ತೇವೆ. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯಂತೆ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ಹೊಸದಾಗಿ ಸೇರ್ಪಡೆ ಮಾಡಿರುವ 2ಸಿ, 2ಡಿ ಪ್ರವರ್ಗಗಳ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಬಲವಾಗಿ ವಾದ ಮಂಡಿಸುತ್ತೇವೆ. ಕಾಂತರಾಜ್‌ ಆಯೋಗ ಸೇರಿ ಬೇರೆ ಆಯೋಗಗಳು ವರದಿ ಕೊಟ್ಟು ಹಲವು ವರ್ಷಗಳು ಕಳೆದರೂ ಏನೂ ಕ್ರಮ ಆಗಿಲ್ಲ.

ಆದರೆ, ಹಿಂದುಳಿದ ಆಯೋಗದ ಮಧ್ಯಂತರ ವರದಿ ಬಂದ ಕೇವಲ ಒಂದು ವಾರದಲ್ಲೇ ಸಚಿವ ಸಂಪುಟದಲ್ಲಿ ಮೀಸಲಾತಿ ಕುರಿತು ನಿರ್ಣಯ ಕೈಗೊಂಡು ನಮ್ಮ ಬದ್ಧತೆ ತೋರಿಸಿದ್ದೇವೆ. ಆಯೋಗದ ಅಂತಿಮ ವರದಿ ಬಂದಾಗಲೂ ಇದೇ ರೀತಿ ಮುಂದುವರಿಯುತ್ತೇವೆ ಎಂದರು.

ಪಂಚಮಸಾಲಿಗಳೆಂದರೆ ರೈತ ವರ್ಗ. ಅನ್ನ ಕೊಡುವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುವ ಅವಶ್ಯಕತೆ ಬಗ್ಗೆ ಸಮುದಾಯದ ಇಬ್ಬರೂ ಗುರುಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಯಾರ ಬಗ್ಗೆಯೂ ಭೇದ-ಭಾವ ಇಲ್ಲ. ಹಳ್ಳಿಯಲ್ಲಿ ಮಣ್ಣಿನ ಜತೆ ದುಡಿಯುವ ವರ್ಗದ ಸ್ಥಿತಿಯನ್ನು ಸುಧಾರಿಸಲು ಯತ್ನಿಸುತ್ತೇವೆ. ಸಾಮಾಜಿಕ ನ್ಯಾಯ ಕೊಟ್ಟೇ ಕೊಡುತ್ತೇವೆ. ಅದಕ್ಕಾಗಿ ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.

Advertisement

ಸರ್ಕಾರ ಒಳ್ಳೆ ಹೆಜ್ಜೆ ಇಟ್ಟಿದೆ: ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀವಚನಾನಂದ ಸ್ವಾಮೀಜಿ ಮಾತನಾಡಿ, ಹರಿಹರ ಪೀಠ ಪ್ರೀತಿಯಿಂದ ಮೀಸಲಾತಿ ಪಡೆಯಲು ಹೊರಟಿದೆ. ಪ್ರೀತಿಯಿಂದ ಜಗವನ್ನೇ ಗೆಲ್ಲಬಹುದು ಎಂಬ ವಿಶ್ವಾಸ ನಮ್ಮದು. ಈ ವಿಚಾರವಾಗಿ ಸೌಹಾರ್ದಯುತವಾಗಿಯೇ ಸರ್ಕಾರವನ್ನು ಜಾಗೃತಗೊಳಿಸಬೇಕು. ಅದನ್ನು ಬಿಟ್ಟು ಸರ್ಕಾರವನ್ನು ಟೀಕಿಸುವುದು, ಕೆಟ್ಟ ಶಬ್ದ ಬಳಸುವುದು ಸರಿಯಲ್ಲ. ಮೀಸಲಾತಿ ಕೊಡಿಸಲು ಸರ್ಕಾರ ಒಳ್ಳೆಯ ಹೆಜ್ಜೆ ಇಟ್ಟಿದೆ. ಈ ವಿಚಾರವಾಗಿ ರೊಟ್ಟಿ, ಅನ್ನ ತಯಾರಾಗಿದೆ. ಬಾಯಿಗೆ ಹಾಕಲು ಅಗಳು ಆರಬೇಕಷ್ಟೇ. ಬೇರೆ ಸಮುದಾಯಕ್ಕೂ ತೊಂದರೆ ಆಗದಂತೆ ನಮಗೂ ಆದಷ್ಟು ಶೀಘ್ರ ನಮ್ಮ ಪಾಲಿನ ನ್ಯಾಯ ಸಿಗುವಂತೆ ಮಾಡಬೇಕು ಎಂದರು.

ಸಿಹಿ ಸುದ್ದಿ ನಿರೀಕ್ಷೆ: ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇಂದಲ್ಲ ನಾಳೆ ಮೀಸಲಾತಿ ವಿಚಾರವಾಗಿ ಪಂಚಮಸಾಲಿ ಸಮುದಾಯಕ್ಕೆ ಸಿಹಿ ಸುದ್ದಿ ಬರಲಿದೆ. ತಾಳ್ಮೆಯಿಂದ ಇರೋಣ. ಇನ್ನೊಬ್ಬರ ಬಗ್ಗೆ ಕೇವಲವಾಗಿ, ಹಗುರವಾಗಿ ಮಾತನಾಡುವುದು ಸರಿಯಲ್ಲ. ವಾಕ್‌ ಸ್ವಾತಂತ್ರ್ಯವಿದೆ ಎಂದು ಏನಾದರೂ ಮಾತನಾಡಬಾರದು ಎಂದರು.

ಟೀಕೆಗಳೇ ಯಶಸ್ಸಿನ ಮೆಟ್ಟಿಲು
ನನ್ನ ಬಗ್ಗೆ ಕೆಲವರು ಏನೇನೋ ಮಾತನಾಡುತ್ತಾರೆ. ಯಾರು ತಪ್ಪು ಮಾಡಿದ್ದಾರೆ. ಯಾರು ಸರಿ ಮಾಡಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಮೀಸಲಾತಿ ವಿಚಾರವಾಗಿ ಯಾರು ಏನೇ ಟೀಕೆ ಮಾಡಿದರೂ ಸಕಾರಾತ್ಮಕವಾಗಿ ಸ್ವೀಕರಿಸಿ, ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಮುದಾಯಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next