Advertisement

ಬ್ರಾಹ್ಮಣಕ್ಕೆ ಬದ್ಧ: ಕುಮಾರಸ್ವಾಮಿ: ಮುಂದುವರಿದ ಜೆಡಿಎಸ್‌-ಬಿಜೆಪಿ ಸಿಎಂ ಸಮರ

01:46 AM Feb 08, 2023 | Team Udayavani |

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರನ್ನು ಗುರಿ ಮಾಡಿಕೊಂಡು ಎಚ್‌.ಡಿ. ಕುಮಾರಸ್ವಾಮಿ ನೀಡಿದ “ಬ್ರಾಹ್ಮಣ’ ಹೇಳಿಕೆ ದಿನಕ್ಕೊಂದು ತಿರುವು ಪಡೆ ಯುತ್ತಿದೆ. ನಾನು ಕೊಟ್ಟ ಹೇಳಿಕೆಗಾಗಿ ಕ್ಷಮೆ ಕೇಳುವುದಿಲ್ಲ. ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಎಚ್‌ಡಿಕೆ ನೇರ ಸವಾಲು ಹಾಕಿದ್ದಾರೆ.

Advertisement

ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಕುಮಾರಸ್ವಾಮಿ ಮೇಲೆ ಮುಗಿಬಿದ್ದಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದು ಇವರ ರಕ್ತದಲ್ಲೇ ಇದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಟುಕಿದರಲ್ಲದೆ, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರನ್ನು ಅವಮಾನಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಲಿ. ಬೇಕಾದರೆ ಪ್ರಹ್ಲಾದ ಜೋಷಿ ಅವರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಈ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ತಕರಾರು ಇಲ್ಲ, ತಕರಾರು ಇರುವುದು ಅವರ ಮೂಲದ ಬಗ್ಗೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದರು.

ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಸಿಎಂ ಆಗಬಹುದು. ಆದರೆ ಆ ಪರಿಸ್ಥಿತಿ ಜೆಡಿಎಸ್‌ನಲ್ಲಿ ಇದೆಯೇ ಎಂದು ಕಿಡಿಕಾರಿದ್ದಾರೆ.

ಜೋಷಿ ವಿರುದ್ಧ
ಲಂಚದ ಆರೋಪ
“ಬ್ರಾಹ್ಮಣ’ ವಿಚಾರ ಮುಂದಿಟ್ಟುಕೊಂಡು ಪ್ರಹ್ಲಾದ್‌ ಜೋಷಿ ವಿರುದ್ಧ ಸಂಘರ್ಷಕ್ಕಿಳಿದಿರುವ ಜೆಡಿಎಸ್‌ ಈಗ ಭ್ರಷ್ಟಾಚಾರದ ಆರೋಪಕ್ಕೆ ಅವರ ಹೆಸರು ಎಳೆತಂದಿದೆ.

Advertisement

ಅಖೀಲ ಭಾರತ ವೈದ್ಯಕೀಯ ಸಂಸ್ಥೆಯಲ್ಲಿ ಹುದ್ದೆ ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ)ಯ ಸದಸ್ಯತ್ವ ಕೊಡಿಸಲು ಪ್ರಹ್ಲಾದ್‌ ಜೋಷಿ ಅವರ ಕಚೇರಿ 2 ಬಾರಿ ಲಂಚ ಪಡೆದಿದೆ ಎಂದು ವಿಧಾನ ಪರಿಷತ್‌ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಭೋಜೇ ಗೌಡ ಆರೋಪ ಮಾಡಿದ್ದಾರೆ.

ಅದಕ್ಕೆ ಸಂಬಂಧಿಸಿದ ಬ್ಯಾಂಕ್‌ ಖಾತೆಯ ವಿವರ ಹಾಗೂ ಅಂದಿನ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಅವರು ಪ್ರಹ್ಲಾದ್‌ಜೋಷಿಗೆ ಬರೆದಿದ್ದರು ಎನ್ನಲಾದ ಪತ್ರ ವನ್ನು ಕೂಡ ಬಿಡುಗಡೆ ಮಾಡಿದರು.

ಪ್ರಹ್ಲಾದ್‌ ಜೋಷಿ ಆಕ್ರೋಶ
ಆರೋಪಕ್ಕೆ ಪ್ರಹ್ಲಾದ್‌ ಜೋಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೋಜೇಗೌಡರು ಬಿಡುಗಡೆ ಮಾಡಿರುವ ಪತ್ರ ಹಾಗೂ ಮೂಲಪತ್ರವನ್ನು ಅಕ್ಕಪಕ್ಕ ಇರಿಸಿ ಟ್ವೀಟ್‌ ಮಾಡಿರುವ ಜೋಷಿ, “ನಾನು ವೈದ್ಯನಲ್ಲ. ಆದರೂ ನೀವು ಮುಚ್ಚಿಟ್ಟಿರುವ ಹೆಸರಿನ ಹಿಂದೆ “ಡಾ|’ ಎಂದಿದೆ. ಅಲ್ಲದೆ ಬಿಡುಗಡೆ ಮಾಡಿರುವ ಪತ್ರದಲ್ಲಿ ವ್ಯಕ್ತಿಯ ಹೆಸರನ್ನು ಮುಚ್ಚಿಟ್ಟಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next