Advertisement

“ಕಸ್ಟೋಡಿಯಲ್‌ ಡೆತ್‌’ಗಳ ಬಗ್ಗೆ ಆಯೋಗ ನಿಗಾ

11:43 AM Dec 06, 2018 | Team Udayavani |

ಬೆಂಗಳೂರು: “ಪೊಲೀಸ್‌ ವಶ’ದಲ್ಲಿ ಸಂಭವಿಸುವ ಸಾವುಗಳು (ಕಸ್ಟೋಡಿಯಲ್‌ ಡೆತ್‌) ಹಾಗೂ ಎನ್‌ಕೌಂಟರ್‌ಗಳ ಬಗ್ಗೆ ಆಯೋಗ ನಿಗಾ ಇಟ್ಟು, ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದು ನಿಜವೇ ಆಗಿದ್ದಲ್ಲಿ ಅಗತ್ಯ ಮಧ್ಯಪ್ರವೇಶ ಮಾಡಲಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಡಿ.ಎಚ್‌.ವಘೇಲಾ ಹೇಳಿದ್ದಾರೆ.

Advertisement

ಡಿಸೆಂಬರ್‌ 10ರಂದು ನಡೆಯಲಿರುವ “ಮಾನವ ಹಕ್ಕುಗಳ ದಿನಾಚರಣೆ’ ಹಿನ್ನೆಲೆಯಲ್ಲಿ ಆಯೋಗದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾನವ ಹಕ್ಕುಗಳನ್ನು ಸ್ವಾಭಾವಿಕ ಹಕ್ಕುಗಳೆಂದು ಪರಿಗಣಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳನ್ನು ಪಡೆದುಕೊಳ್ಳಲು “ಮನುಷ್ಯ’ ಆಗಬೇಕಿರುವುದೊಂದೇ ಅರ್ಹತೆ. ಈ ವಿಚಾರದಲ್ಲಿ ಲಿಂಗ, ಜಾತಿ, ಧರ್ಮ, ಪ್ರದೇಶ, ಭಾಷೆ ಯಾವುದನ್ನೂ ನೋಡಲಾಗುವುದಿಲ್ಲ. ಖಾಸಗಿ ದೂರು ಅಥವಾ ಆಯೋಗ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ದೂರು ಮಾತ್ರವೇ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಪ್ರಮುಖ ಮಾನದಂಡ ಎಂದರು.

ಪ್ರಕರಣ ಅಥವಾ ಸಂದರ್ಭ ಯಾವುದು ಅನ್ನುವುದಕ್ಕಿಂತ ಮಾನವ ಹಕ್ಕುಗಳ ಮುಖ್ಯ. ಹಾಗಾಗಿ, ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ಯಾರೇ ಮಾಡಲಿ ಅದರ ಬಗ್ಗೆ ಆಯೋಗ ಗಮನಹರಿಸಲಿದೆ. ಹಿನ್ನೆಲೆಯಲ್ಲಿ “ಪೊಲೀಸ್‌ ವಶ’ದಲ್ಲಿ ಸಂಭವಿಸುವ ಸಾವುಗಳು ಮತ್ತು ಎನ್‌ಕೌಂಟರ್‌ಗಳ ಬಗ್ಗೆಯೂ ಆಯೋಗ ನಿಗಾ ಇಟ್ಟು, ಸಂದರ್ಭಾನುಸಾರ ಅಗತ್ಯ ಮಧ್ಯಪ್ರವೇಶ ಮಾಡಲಿದೆ.

ಈ ಮಧ್ಯ ಪ್ರವೇಶ ಕಾನೂನು ಪ್ರಕ್ರಿಯೆಯಲ್ಲಿನ ಹಸ್ತಕ್ಷೇಪ ಆಗಿರುವುದಿಲ್ಲ. ಏಕೆಂದರೆ, ಆಯೋಗ ವಿಚಾರಣಾ ನ್ಯಾಯಾಲಯ ಅಲ್ಲ. ಒಂದೊಮ್ಮೆ ಮಾನವ ಹಕ್ಕುಗಳ ಉಲ್ಲಂಘನೆ ರುಜುವಾತ ಆದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಅಥವಾ ಸಂಬಂಧಿಸಿದ ಶಿಸ್ತುಕ್ರಮ ಜಾರಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Advertisement

“ನಕಲಿ’ಗಳ ಬಗ್ಗೆ ಎಚ್ಚರವಿರಲಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಕಾಳಜಿಯೊಂದಿಗೆ ಕೆಲಸ ಮಾಡುವ ಹಲವು ಸಂಘಟನೆಗಳು, ವ್ಯಕ್ತಿಗಳು ಇದ್ದಿರಬಹುದು. ಆದರೆ, ನಕಲಿ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ. ಈ ನಕಲಿಗಳ ಹಾವಳಿಯಲ್ಲಿ ಅಸಲಿಗಳು ಕಣ್ಮರೆಯಾಗುತ್ತಿದ್ದಾರೆ, ಮುಗ್ಧ ಜನ ಮೋಸ ಹೋಗುತ್ತಿದ್ದಾರೆ.

ಆದ್ದರಿಂದ ನಕಲಿ ಸಂಘಟನೆಗಳು ಮತ್ತು ವ್ಯಕ್ತಿಗಳ ಬಗ್ಗೆ ಸಮಾಜ ಎಚ್ಚರದಿಂದರಬೇಕು. ಮಾನವ ಹಕ್ಕುಗಳ ಆಯೋಗವೊಂದೇ ಮಾನವ ಹಕ್ಕುಗಳ ರಕ್ಷಣೆಗೆ ಇರುವ ಏಕೈಕ ಹಾಗೂ ಸಾಂವಿಧಾನಿಕ ಸಂಸ್ಥೆ. ನಕಲಿಗಳ ಬಗ್ಗೆ ಕ್ರಮ ಕೈಗೊಳ್ಳಲು ಆಯೋಗಕ್ಕೆ ನೇರವಾಗಿ ಅಧಿಕಾರ ಇಲ್ಲದಿದ್ದರೂ, ಅಂತಹ ಪ್ರಕರಣಗಳು ಗಮನಕ್ಕೆ ಬಂದರೆ, ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುತ್ತದೆ ಎಂದು ನ್ಯಾ. ವಘೇಲಾ ತಿಳಿಸಿದರು.

ಮೂರು ತಿಂಗಳಲ್ಲಿ ದೂರುಗಳು ಇತ್ಯರ್ಥ: ಆಯೋಗ ಅಸ್ತಿತ್ವಕ್ಕೆ ಬಂದಾಗಿನಿಂದ ಕಳೆದ 11 ವರ್ಷಗಳಲ್ಲಿ ಆಯೋಗದಲ್ಲಿ ಸುಮಾರು 77 ಸಾವಿರ ದೂರುಗಳು ದಾಖಲಾಗಿವೆ. ಈ ಪೈಕಿ ಶೇ.30ರಷ್ಟು ಆಯೋಗವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ದೂರುಗಳಾಗಿವೆ. ಇದರಲ್ಲಿ 72, 450 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

2018ರಲ್ಲಿ ಇಲ್ಲಿತನಕ 5 ಸಾವಿರ ದೂರುಗಳನ್ನು ಸ್ವೀಕರಿಸಲಾಗಿದ್ದು, ಹಿಂದಿನ ದೂರುಗಳು  ಸೇರಿ 5,900 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 4,800 ದೂರುಗಳು ವಿಲೇವಾರಿಗೆ ಬಾಕಿ ಇವೆ. ಪ್ರತಿ ದಿನ ಸರಾಸರಿ 13 ರಿಂದ 15 ದೂರುಗಳು ದಾಖಲಾಗುತ್ತವೆ. ದೂರು ದಾಖಲಾದ ದಿನದಿಂದ 3 ತಿಂಗಳಲ್ಲಿ ಅದನ್ನು ವಿಲೇವಾರಿ ಮಾಡಲು ಆಯೋಗದಲ್ಲಿ ಮಿತಿ ನಿಗದಿಪಡಿಸಿಕೊಳ್ಳಲಾಗಿದೆ ಎಂದು ವಘೇಲಾ ತಿಳಿಸಿದರು.

ಸಿಬ್ಬಂದಿ ಕೊರತೆ: ಆಯೋಗಕ್ಕೆ 110 ಸಿಬ್ಬಂದಿ ಬೇಕು. ಆದರೆ, ಸರ್ಕಾರ 40 ಸಿಬ್ಬಂದಿಯನ್ನು ಮಾತ್ರ ಎರವಲು ಸೇವೆ ಮೇಲೆ ಒದಗಿಸಿದೆ. 36 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಯೋಗಕ್ಕೆ ಹಣಕಾಸಿನ ಸಮಸ್ಯೆ ಇಲ್ಲ. ಆದರೆ, ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳ ಕೊರತೆ ಇದೆ. ಅದಾಗ್ಯೂ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಆಯೋಗ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next