Advertisement

ಹೆಬ್ಬೇವು ಬದುಕಿನಾ ದೀಪ

06:00 AM Dec 10, 2018 | |

ಬನಹಟ್ಟಿಯ ರೈತ  ಜಿ. ಎಂ. ಪಾಟೀಲ ಹಾಗೂ ಸಹೋದರರ ಈ ಸಲದ ಹೊಸ ಪ್ರಯತ್ನ ಹೆಬ್ಬೇವು. ಇದನ್ನು ನೋಡಿದ ಇತರೆ ರೈತರು ಹುಬ್ಬೇರಿಸಿದ್ದಾರೆ.  ಕೃಷಿ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇವು ಬೆಳೆಯುವ ಮೂಲಕ ಕಾಡನ್ನು ನಾಡಿಗೆ ತಂದಿದ್ದಾರೆ ಪಾಟೀಲ್‌ ಅಂಡ್‌ ಕಂಪೆನಿ. 
 
ಈ ಮೊದಲು ಅವರು, ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ಅರಿಶಿಣ ಬೆಳೆದರೂ ಅದಕ್ಕೆ ಸೂಕ್ತ ಬೆಲೆ ಸಿಗಲಿಲ್ಲ. ಆದ್ದರಿಂದ ಪಾಟೀಲರು ಹೆಬ್ಬೇವಿಗೆ ಮೊರೆ ಹೋದರು.  ಜಗದಾಳ ಗ್ರಾಮದಲ್ಲಿರುವ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಕಳೆದ 15 ತಿಂಗಳ ಹಿಂದೆ ನೆಟ್ಟ ಹೆಬ್ಬೇವು (ಮಲೇಯನ್‌ ನೀಮ್‌) ಈಗ ಬೃಹದಾಕಾರವಾಗಿ ಬೆಳೆದಿದೆ. 

Advertisement

ಆಂಧ್ರದಿಂದ 1,500 ಸಸಿಗಳನ್ನು ತಂದು, 10*10 ಅಳತೆ ಜಾಗದಲ್ಲಿ ಚೌಕಾಕಾರವಾಗಿ ಗುಂಡಿ ತೆಗೆದು ನೆಡಲಾಗಿದೆ. ನೆಡುವ ಮುನ್ನ ಕೊಟ್ಟಿಗೆ ಗೊಬ್ಬರ ಹಾಗೂ ಸರಕಾರಿ ಗೊಬ್ಬರವನ್ನು ಹಾಕಲಾಗಿದ್ದು,  ಹನಿ ನೀರಾವರಿ ಪದ್ಧತಿ ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ನೀರಿನ ನಿರ್ವಹಣೆ ಸಾಧ್ಯವಾಗುತ್ತಿದೆ. ಗಿಡಗಳ ಅಂತರ ಕಾಯ್ದುಕೊಂಡಿರುವುದರಿಂದ ಅದರ ನಡುವೆ 15 ತಿಂಗಳಲ್ಲಿ ಮೆಣಸಿನ ಕಾಯಿ ಹಾಗೂ ಅರಿಶಿಣವನ್ನು ಬೆಳೆಯುತ್ತಿದ್ದಾರೆ.  ಎರಡರಿಂದ ಮೂರು ವರ್ಷಗಳವರೆಗೆ ಕಾಯಿಪಲ್ಲೆ, ಇತರೆ ಬೆಳೆಗಳನ್ನು ಬೆಳೆಯಬಹುದು. ನಂತರ ಹೆಬ್ಬೇವು ಎತ್ತರಕ್ಕೆ ಬೆಳೆಯುವುದರಿಂದ, ನೆರಳಿನಲ್ಲಿ ಬೆಳೆಯುವ ನೆರಳು ಮಿಶ್ರಿತ ಬೆಳೆಗಳನ್ನು ಕೂಡಾ ಬೆಳೆಯಬಹುದು. ಅಲ್ಲದೇ, ಈಗ ನಡುವೆ ಹನಿ ನೀರಾವರಿ ಮೂಲಕ ಇತರೆ ಬೆಳೆಗಳಿಗೆ ನೀರು ಉಣಿಸುತ್ತಿರುವುದರಿಂದ ಹೆಬ್ಬೇವುಗಳಿಗೆ ನೀಡಲಾಗುತ್ತಿದ್ದ ನೀರನ್ನು ಬಂದ್‌  ಮಾಡಲಾಗಿದೆ. ಈಗ ಮುಂದಿನದಾಗಿ ಶುಂಠಿಯನ್ನು ಇದರಲ್ಲಿ ಬೆಳೆಯುವ ಯೋಜನೆಯನ್ನು ಹೊಂದಿರುವುದಾಗಿ ಧರೆಪ್ಪ ಪಾಟೀಲ ಹೇಳುತ್ತಾರೆ. 

ಒಂದು ಹೆಬ್ಬೇವಿನ 8-10 ವರ್ಷ ಬೆಳೆಸಿದರೆ 8ವರ್ಷದ ಒಂದು ಗಿಡ 1 ಟನ್‌ ತೂಕವಿರುತ್ತದೆ. ಅದಕ್ಕೆ  ಸದ್ಯದ ಮಾರುಕಟ್ಟೆ ದರದ ಪ್ರಕಾರ 8 ಸಾವಿರ ಬೆಲೆ ಇದೆ.  ಎಕರೆಗೆ ನಾನೂರು ಗಿಡ ಬೆಳೆಯಬಹುದು. ಅಂದರೆ ಒಟ್ಟು 32 ಲಕ್ಷ ಆದಾಯವಿದೆ.  ಜೊತೆಗ ಪ್ರತಿ ವರ್ಷ ಇತರೆ ಬೆಳೆಗಳಿಂದಲೂ ಆದಾಯ ಗಳಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಪಾಟೀಲ್‌ ಸಹೋದರರು. 

ಗಿಡದ ಕೊಂಬೆಗಳನ್ನು ಕತ್ತರಿಸಿ ಆ ಎಲೆಗಳನ್ನು ಆಡು, ಹಾಗೂ ಕುರಿ ಸಾಕಾಣಿಕೆಗೆ ಬಳಸಿಕೊಳ್ಳಲಾಗುತ್ತದೆ. ಇದರ ಜೊತೆ ಬೆಳೆದ ಬೆಳೆಗಳಿಗೆ ಗೊಬ್ಬರ ನೀಡುತ್ತಿರುವುದರಿಂದ ಹೆಬ್ಬೇವು ಬೆಳೆಯಲು ಪ್ರತ್ಯೇಕ ಗೊಬ್ಬರ ಅವಶ್ಯವಾಗುತ್ತಿಲ್ಲ ಎಂದು ಪಾಟೀಲರು ಹೇಳುತ್ತಾರೆ. ಪ್ಲೆ„ವುಡ್‌ ಕಾರ್ಖಾನೆಗೆ ಸರಬರಾಜು ಆಗುವ ಈ ಗಿಡದ ಬೊಡ್ಡೆಗೂ ಬಹಳಷ್ಟು ಬೇಡಿಕೆ ಇರುವುದರಿಂದ ಹೆಚ್ಚಿನ ಲಾಭವಾಗುವುದರಲ್ಲಿ ಎರಡು ಮಾತಿಲ್ಲ. 

– ಕಿರಣ ಶ್ರೀಶೈಲ ಆಳಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next