ಬೆಂಗಳೂರು: ನಾಡಿನ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ನಾಡಿನ ವಿವಿಧ ಭಾಗಗಳಲ್ಲಿ ಹಲವು ಮಂದಿ ಪ್ರತಿಭಾವಂತ ಯುವ ಸಾಹಿತಿಗಳಿದ್ದು, ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರು ರಚಿಸಿದ ಕವಿತೆಗಳನ್ನು ಹೆಸರಾಂತ ಗಾಯಕರಿಂದ ಹಾಡಿಸಿ “ಚಕೋರ ಭಾವ ಗೀತೆಗಳು’ ಎಂಬ ಶೀರ್ಷಿಕೆಯಡಿ ಡಿವಿಡಿ ಹೊರತರಲು ಮುಂದಾಗಿದೆ.
ಈ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ “ಚಕೋರ ವಾಟ್ಸ್ ಆಪ್’ ವೇದಿಕೆ ಹುಟ್ಟು ಹಾಕಿ ನಾಡಿನ ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿತ್ತು. ಅಲ್ಲದೆ ಯುವ ಕವಿಗಳೇ ಚಕೋರ ವೇದಿಕೆಯಲ್ಲಿ ತಾವು ರಚಿಸಿದ ಕವಿತೆಗಳನ್ನು ವಾಚನ ಮಾಡಿದ್ದರು. ಇದಕ್ಕೆ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಖುಷಿಯಲ್ಲೇ ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿ “ಚಕೋರ ಭಾವ ಗೀತೆಗಳು’ ಎಂಬ ಶೀರ್ಷಿಕೆಯಡಿ ಡಿವಿಡಿ ಹೊರತರಲು ಅಣಿಯಾಗಿದೆ. ಸುಮಾರು 23 ಸಾಹಿತಿಗಳು ವಿಭಿನ್ನ ರೀತಿಯ ಭಾವಗೀತೆಗಳನ್ನು ರಚನೆ ಮಾಡಿದ್ದಾರೆ.
ಮಕ್ಕಳ ಗೀತೆಗಳಿಗೆ ಆದ್ಯತೆ: ಭಾವಗೀತೆಗಳ ಗುತ್ಛ ವಿಭಿನ್ನ ರೀತಿಯಲ್ಲಿ ಮೂಡಿ ಬರಲಿದೆ. ಮಕ್ಕಳ ಗೀತೆಗಳಿಗೆ ಆದ್ಯತೆ ನೀಡಲಾಗಿದೆ. ಬುದ್ಧನ ಸಂದೇಶ ಮತ್ತು ಬಂಡಾಯ ಕವಿತೆಗಳಿಗೆ ಮನ್ನಣೆ ನೀಡಲಾಗಿದ್ದು ಇವುಗಳ ಜೊತೆಗೆ ನವೋದಯ ಪರಿಭಾಷೆಯ ಹಾಡುಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟ ಸಾಹಿತ್ಯ ಅಕಾಡೆಮಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸ್ತ್ರೀವಾದಿ ದೃಷ್ಟಿಕೋನಕ್ಕೆ ಸಂಬಂಧಿಸಿದ ಕವಿತೆಗಳು ಕೂಡ ಇದರಲ್ಲಿ ಸೇರಿವೆ. ದಾಂಪತ್ಯ, ಪ್ರೀತಿ -ಪ್ರೇಮದ ಜೊತೆಗೆ ನಿಸರ್ಗದ ಕುರಿತಾದ ಗೀತೆಗಳು ಸೇರಿದಂತೆ ಹಲವು ಕವಿತೆಗಳು ಡಿವಿಡಿಯಲ್ಲಿ ಇರಲಿವೆ.
ಇದೊಂದು ಹೊಸ ಪ್ರಯತ್ನ: ಈ ಹಿಂದೆ ಕನ್ನಡ ಸಾಹಿತ್ಯ ಅಕಾಡೆಮಿ ಈ ರೀತಿಯ ಕಾರ್ಯಕ್ಕೆ ಮುಂದಾಗಿರಲಿಲ್ಲ.ಆದರೆ ಈಗ ಯುವ ಕವಿಗಳನ್ನು ಬೆನ್ನುತ್ತಟ್ಟುವ ಹಿನ್ನೆಲೆಯಲ್ಲಿ ಅಕಾಡೆಮಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಸಾಹಿತಿಗಳಿಂದ ಚಕೋರ ವೇದಿಕೆಯಲ್ಲಿ ಕವಿತೆಗಳನ್ನು ವಾಚಿಸಿದ ನಂತರ ಅವರ ಕವಿತೆಗಳನ್ನು ಗಾಯಕರು ಹಾಡಿದ್ದಾರೆ. ಯುವ ಕವಿಗಳಾದ ಡಾ.ಕವಿತಾ ಕುಸುಗಲ್, ಆಸೀಫಾ ಬೇಗಂ ಸೇರಿದಂತೆ ಹಲವು ಯುವ ಸಾಹಿತಿಗಳು ಉತ್ತಮವಾದ ಕವಿತೆಗಳನ್ನು ರಚನೆ ಮಾಡಿದ್ದಾರೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಹೇಳಿದ್ದಾರೆ.
ಮುನ್ನೂರು ಡಿವಿಡಿ: ಅಕಾಡೆಮಿ ಈ ಭಾವಗೀತೆಗಳ ಗುತ್ಛವನ್ನು ಹೊರತರಲು ಸಲುವಾಗಿಯೇ ಐವ್ವತ್ತು ಸಾವಿರ ರೂ.ವೆಚ್ಚ ಮಾಡಿದೆ. ಗಾಯಕರು ಮತ್ತು ಸಾಹಿತಿಗಳು ಅಕಾಡೆಮಿಯಿಂದ ಯಾವುದೇ ರೀತಿಯ ಗೌರವ ಧನ ಪಡೆದಿಲ್ಲ. ಕೇವಲ ಸ್ಟುಡಿಯೋ ಮತ್ತು ರೆಕಾರ್ಡಿಂಗ್ ಸಂಬಂಧಿಸಿದ ಕಾರ್ಯಕ್ಕಷ್ಟೇ ಹಣ ಖರ್ಚು ಮಾಡಲಾಗಿದೆ ಎಂದು ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ಅಕಾಡೆಮಿ 300 ಡಿವಿಡಿಗಳನ್ನು ಮಾತ್ರ ಹೊರತರಲಿದೆ. ಇವುಗಳಿಗೆ ಬೇಡಿಕೆ ಬಂದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಡಿವಿಡಿ ಹೊರತರುವುದಾಗಿ ಹೇಳಿದ್ದಾರೆ.
ಯುವ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಇದರಲ್ಲಿ “ಚಕೋರ ಭಾವಗೀತೆಗಳು’ ಎಂಬ ಶೀರ್ಷಿಕೆಯಲ್ಲಿ ಹೊರತರಲಾಗುತ್ತಿರುವ ಡಿವಿಡಿ ಕೂಡಾ ಸೇರಿದೆ.
-ಡಾ.ಅರವಿಂದ ಮಾಲಗತ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು
* ದೇವೇಶ ಸೂರಗುಪ್ಪ