ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಸಾರ್ವಜನಿಕರು ರಸ್ತೆಯಲ್ಲಿ ಕಸ ಸುರಿಯುವುದನ್ನು ಮುಂದುವರಿಸುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಬಿಬಿಎಂಬಿ ಮುಂದಾಗಿದೆ. ಪೌರಕಾರ್ಮಿಕರಿಗೆ ಕಸ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುವ ನಿವಾಸಿಗಳ ಪತ್ತೆಗೆ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ್ದು, ರಸ್ತೆಗೆ ಕಸ ಎಸೆಯುವವರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಪೌರಕಾರ್ಮಿಕರು ಪ್ರತಿ ನಿತ್ಯ ಮನೆ- ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುತ್ತಾರೆ. ಆದರೆ, ಪೌರಕಾರ್ಮಿಕರು ಬಂದ ವೇಳೆ ಕಸ ನೀಡದೆ ಉದಾಸೀನತೆ ತೋರುವ ಸಾರ್ವಜನಿಕರು ಬಳಿಕ ರಸ್ತೆ ಬದಿ ಕಸ ಸುರಿದು ಬ್ಲಾಕ್ ಸ್ಪಾಟ್ ಸೃಷ್ಟಿ ಮಾಡುತ್ತಾರೆ. ಇದರಿಂದ ಸುತ್ತಮುತ್ತಲಿನ ಪ್ರದೇಶದ ನೈರ್ಮಲ್ಯì ಹಾಳಾಗುವ ಜತೆಗೆ ಸೊಳ್ಳೆ, ಬೀದಿ ನಾಯಿಗಳ ಕಾಟ ಶುರುವಾಗುತ್ತದೆ. ಇದನ್ನು ತಪ್ಪಿಸಲು ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ.
ಹೀಗಾಗಿ ಬ್ಲಾಕ್ ಸ್ಪಾಟ್ ಸೃಷ್ಟಿಯಾಗುವುದನ್ನು ನಿವಾರಿಸಲು ಪಾಲಿಕೆಯ ವ್ಯಾಪ್ತಿಯನ್ನು 750 ಬ್ಲಾಕ್‌ಗಳಾಗಿ ವಿಭಾಗಿಸಿಕೊಂಡು ನಿತ್ಯ ಪ್ರತಿಯೊಬ್ಬರೂ ಕಸ ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಪ್ರತಿ ಬ್ಲಾಕ್‌ಗೆ ಪ್ರತ್ಯೇಕ ಪೌರಕಾರ್ಮಿಕರು, ಆಟೋ ಟಿಪ್ಪರ್ ನಿಗದಿ ಮಾಡಲಾಗಿದೆ. ಇಷ್ಟೆಲ್ಲಾ ಕ್ರಮ ಕೈಗೊಂಡರೂ ಯಾವ ಮನೆಯವರಾದರೂ ಕಸ ನೀಡುತ್ತಿಲ್ಲ ಎಂದಾದರೆ ಆ ಕುರಿತು ಪೌರಕಾರ್ಮಿಕರು ಮಸ್ಟರಿಂಗ್ ಕೇಂದ್ರದ ಬಳಿ ಆಯಾ ಬ್ಲಾಕ್‌ನ ನಿರ್ವಹಣೆ ಜವಬ್ದಾರಿ ಹೊತ್ತಿರುವ ಎಂಜಿನಿಯರ್‌ಗೆ ವರದಿ ನೀಡಬೇಕು. ಮನೆಯಲ್ಲಿಯೇ ಇದ್ದರೂ ನಿಯಮಿತವಾಗಿ (2-3 ದಿನ) ಕಸ ನೀಡದಿದ್ದರೆ ಅಂತಹವರ ಬಗ್ಗೆ ವರದಿ ನೀಡಬೇಕು.
ಭಾರೀ ದಂಡ: ಪೌರ ಕಾರ್ಮಿಕರು ನೀಡುವ ವರದಿ ಆಧರಿಸಿ ಸಂಬಂಧಪಟ್ಟ ಮನೆಯ ಪಿಐಡಿ ಸಂಖ್ಯೆ ಆಧಾರದ ಮೇಲೆ 5 ದಿನದ ಬಳಿಕ ಬಿಬಿಎಂಪಿ ಅಧಿಕಾರಿಗಳು ಗಮನ ಹರಿಸಲಿದ್ದಾರೆ. ಅವರು ಪೌರಕಾರ್ಮಿಕರಿಗೆ ಕಸ ನೀಡದೆ ಬಳಿಕ ಕಸವನ್ನು ರಸ್ತೆಗೆ ಎಸೆಯುತ್ತಿರುವುದನ್ನು ಪ್ರತ್ಯಕ್ಷವಾಗಿ ಪತ್ತೆ ಮಾಡಿ 5 ಸಾವಿರ ರೂ.ವರೆಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗುತ್ತದೆ. ದಂಡ ಪಾವತಿ ಮಾಡದಿದ್ದರೆ ಪಿಐಡಿ ಸಂಖ್ಯೆಗೆ ಜಮೆ ಮಾಡಿ ಆಸ್ತಿ ತೆರಿಗೆಯಲ್ಲಿ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ ಜತೆ ಮಾತುಕತೆ: ಇನ್ನು ಹೊಸ ತಂತ್ರಾಂಶ ಅಭಿವೃದ್ಧಿ ಕುರಿತು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಬಿಎಸ್‌ಎನ್‌ಎಲ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ಸದ್ಯ ಈ ಕುರಿತು ಪ್ರಾಥಮಿಕ ಮಾತುಕತೆ ನಡೆಸಲಾಗಿದ್ದು, ತಂತ್ರಾಂಶ ರೂಪು ರೇಷಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ.
ಮನೆ ಬಾಗಿಲಿಗೆ ಬರುವ ಪೌರಕಾರ್ಮಿಕರಿಗೆ ಕಸ ನೀಡದೆ ಎಲ್ಲೆಂದರಲ್ಲಿ ಹರಡುವ ನಾಗರೀಕರ ಪತ್ತೆಗೆ ಹೊಸ ತಂತ್ರಾಂಶ ಅಭಿವೃ ದ್ಧಿಪಡಿಸಲಾಗುವುದು. ಈ ಬಗ್ಗೆ ಈಗಾಗಲೇ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ.
-ಸರ್ಫರಾಜ್‌ಖಾನ್, ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ