ಬೆಂಗಳೂರು: ಬಾಯಲ್ಲಿ ನೀರೂರಿಸುವ ಹಲಸಿನ ಹಪ್ಪಳ, ಚಿಪ್ಸ್ ರುಚಿ ನೋಡಿರುತ್ತೀರ. ಆದರೆ, ಹಲಸಿನ ಚಾಕೋಲೇಟ್ ತಿಂದಿರುವಿರಾ? ಅಂದುಕೊಂಡಂತೆ ಎಲ್ಲವೂ ನಡೆದರೆ, ಶೀಘ್ರದಲ್ಲೇ ನೀವು “ಜಾಕೋಲೇಟ್’ ಸವಿಯಲಿದ್ದೀರಿ!
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಹಲಸಿನ ಬೀಜಗಳಿಂದ ಚಾಕೋಲೇಟ್‌ಗಳನ್ನು ಅಭಿವೃದ್ದಿಪಡಿಸಿದೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಬಂಧ ಪ್ರತಿಷ್ಠಿತ ಕ್ಯಾಂಪ್ಕೋ ಜತೆಗೂ ಮಾತುಕತೆ ನಡೆಸಿದ್ದು, ಪೂರಕ ಸ್ಪಂದನೆ ದೊರಕಿದೆ. ಅಲ್ಲದೆ, ಚಾಕೋಲೇಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ಯಾಡ್ಬರೀಸ್ ಕೂಡ ಹಲಸಿನ ಬೀಜಗಳಿಂದ ತಯಾರಿಸಿದ “ಜಾಕೋಲೇಟ್’ ರುಚಿ ಸವಿಯಲು ಭೇಟಿ ನೀಡಲಿದೆ ಎಂದು ಐಐಎಚ್‌ಆರ್ ನಿರ್ದೇಶಕ ಡಾ.ಎಂ.ಆರ್. ದಿನೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾನ್ಯವಾಗಿ ಹಲಸಿನಿಂದ ತಯಾರಿಸಿದ ಚಿಪ್ಸ್, ಹಪ್ಪಳ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ, ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಜಾಕೋಲೇಟ್’ ಅಭಿವೃದ್ದಿಪಡಿಸಿದೆ. ದೇಶದಲ್ಲೇ ಮೊದಲ ಬಾರಿ ಇಂತಹದ್ದೊಂದು ಉತ್ಪನ್ನವನ್ನು ಪರಿಚಯಿಸಲಾಗುತ್ತಿದೆ. ಇದಲ್ಲದೆ, ಬಿಸ್ಕತ್ತುಗಳನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಯತ್ನ ನಡೆದಿದೆ. ಒಂದು ಗಿಡದಲ್ಲಿ ನೂರಾರು ಹಲಸಿನ ಹಣ್ಣುಗಳಿರುತ್ತವೆ. ಅದರಲ್ಲಿ ಶೇ.20ರಿಂದ 30ರಷ್ಟು ಬೀಜಗಳಿರುತ್ತವೆ. ಈ ಹೊಸ ಉತ್ಪನ್ನದ ಆವಿಷ್ಕಾರದಿಂದ ಹಲಸು ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಗುಲಾಬಿಯಲ್ಲಿ “ಅರ್ಕ ಪರಿಮಳ’ ಎಂಬ ನೂತನ ತಳಿಯನ್ನು ಅಭಿವೃದ್ಧಿಪಡಿಸಿದ್ದು, ಇದು ಹೆಚ್ಚು ಸುವಾಸನೆವುಳ್ಳದ್ದಾಗಿದೆ. ಹಾಗಾಗಿ, ಗುಲ್ಕಂದಕ್ಕೆ ಇದನ್ನು ಬಳಸಬಹುದಾಗಿದೆ. ಈ ಸಂಬಂಧ ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ವೇಳೆ, ಈ ಪರೀಕ್ಷೆಯಲ್ಲಿ ಪೂರಕ ಫಲಿತಾಂಶ ಬಂದರೆ, ಇಲ್ಲಿನ ಗುಲಾಬಿಗೆ ಮತ್ತಷ್ಟು ಬೇಡಿಕೆ ಬರಲಿದೆ. ಆ ಮೂಲಕ ಬೆಳೆಗಾರರಿಗೆ ಹೆಚ್ಚಿನ ಆದಾಯ ದೊರೆಯಲಿದೆ ಎಂದು ಡಾ.ದಿನೇಶ್ ಹೇಳಿದರು.
ಹಲಸು ತಳಿಗಳಿಗಾಗಿ ಒಪ್ಪಂದ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯಲ್ಲಿ “ಸಿದ್ದು’ ಹಲಸಿನಿಂದ ತಳಿಯ ಮಾಲಿಕ ಪರಮೇಶ ಅವರ ಅದೃಷ್ಟದ ಬಾಗಿಲು ತೆರೆದಿದೆ. ಅವರಿಗೆ ಈಗ ವಾರ್ಷಿಕ ಲಕ್ಷಾಂತರ ರೂ. ಆದಾಯ ಬರುತ್ತಿದೆ. ಇದೇ ಮಾದರಿಯಲ್ಲಿ ತುಮಕೂರು ವ್ಯಾಪ್ತಿಯಲ್ಲಿ ಇನ್ನೂ ಮೂರು ತಳಿಗಳನ್ನು ಐಐಎಚ್‌ಆರ್ ಗುರುತಿಸಿದ್ದು, ವರ್ಷಾಂತ್ಯಕ್ಕೆ ಆ ತಾಯಿ ಮರದ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.