Advertisement

ನಂಜುಂಡಿಯ ಕಾಮಿಡಿ ದರ್ಬಾರ್‌

05:38 PM Apr 06, 2018 | |

ತಾಯಿಗೆ ಶ್ರೀಮಂತಿಕೆಯ ಮದ ತಲೆಗೇರಿದೆ. ಮಗನಿಗೆ ಹೆಣ್ಣು ನೋಡುವ ನೆಪದಲ್ಲಿ ಊರಲ್ಲಿರುವ ಹೆಣ್ಣು ಮಕ್ಕಳನ್ನೆಲ್ಲಾ ಅವಮಾನಿಸುತ್ತಿದ್ದಾಳೆ. ಆದರೆ, ಹುಡುಗನ ತಂದೆಗೆ ತನ್ನ ಪತ್ನಿಯ ದುರಹಂಕಾರ ಇಷ್ಟವಾಗೋದಿಲ್ಲ. ವಿದೇಶದಲ್ಲಿರುವ ಮಗನಿಗೆ ಫೋನ್‌ ಮಾಡಿ, “ನಿನ್ನ ತಾಯಿಯ ದುರಹಂಕಾರ ಜಾಸ್ತಿಯಾಗುತ್ತಿದೆ. ಊರಲ್ಲಿರುವ ಹೆಣ್ಣು ಮಕ್ಕಳ ಕಣ್ಣೀರು ಹಾಕಿಸುತ್ತಿದ್ದಾಳೆ. ನೀನೇ ಏನಾದರೊಂದು ವ್ಯವಸ್ಥೆ ಮಾಡಬೇಕು’ ಎನ್ನುತ್ತಾನೆ.

Advertisement

ಅಲ್ಲಿಂದ ಆಟ ಶುರು. ತಾಯಿಯನ್ನು ಸರಿದಾರಿಗೆ ತರಲು ಆತ ಒಂದು ನಾಟಕವಾಡುತ್ತಾನೆ. ಅದು ಸಲಿಂಗಿ ಮದುವೆ. ತನ್ನ ಸ್ನೇಹಿತನೊಬ್ಬನ ಗೆಟಪ್‌ ಬದಲಿಸಿ, ತಾನವನನ್ನು ಮದುವೆಯಾಗಿದ್ದೇನೆಂದು ಮನೆಗೆ ಕರೆದುಕೊಂಡು ಬರುತ್ತಾನೆ. ಅಲ್ಲಿಂದ ಮುಂದೆ ಏನೇನಾಗುತ್ತದೆ ಎಂಬುದನ್ನು ನೋಡಬೇಕಿದ್ದಾರೆ ನೀವು “ನಂಜುಂಡಿ ಕಲ್ಯಾಣ’ ಚಿತ್ರ ನೋಡಿ. ನಿರ್ದೇಶಕ ರಾಜೇಂದ್ರ ಕಾರಂತ್‌ ಒಂದು ಸಿಂಪಲ್‌ ಕಥೆಯನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಾಮಿಡಿಯಾಗಿ ಕಟ್ಟಿಕೊಡಲು ಪ್ರಯತ್ನ ಪಟ್ಟಿದ್ದಾರೆ.

ಪ್ರತಿಯೊಂದು ಸನ್ನಿವೇಶದಲ್ಲೂ ಕಾಮಿಡಿ ತುಂಬಿ ತುಳುಕುತ್ತಿರಬೇಕು ಎಂಬುದು ಅವರ ಸ್ಪಷ್ಟ ಉದ್ದೇಶ. ಆ ಉದ್ದೇಶದ ಈಡೇರಿಕೆಗೆ ಅವರು ಸಾಕಷ್ಟು ಶ್ರಮ ಪಟ್ಟಿರೋದು ಸಿನಿಮಾದುದ್ದಕ್ಕೂ ಕಾಣಸಿಗುತ್ತದೆ. ಅವರ ಶ್ರಮ ಸಾರ್ಥಕವಾಗಿದೆಯಾ ಎಂದರೆ ಒಂದೇ ಮಾತಲ್ಲಿ ಉತ್ತರಿಸೋದು ಕಷ್ಟ. ಹಾಗಂತ ನಗುಬರುವುದಿಲ್ಲವೇ ಎಂದರೆ ಖಂಡಿತಾ ಬರುತ್ತದೆ. ಇಡೀ ಸಿನಿಮಾವನ್ನು ಕಾಮಿಡಿಗೆ ಮೀಸಲಿಟ್ಟಿರೋದರಿಂದ ಇಲ್ಲಿ ಸೆಂಟಿಮೆಂಟ್‌, ಆ್ಯಕ್ಷನ್‌ಗೆ ಹೆಚ್ಚು ಜಾಗವಿಲ್ಲ.

ಹೊಸ ಹೊಸ ಸನ್ನಿವೇಶಗಳ ಮೂಲಕ ಕಚಗುಳಿ ಇಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಶ್ರೀಮಂತ ಕುಟುಂಬದ ಹುಡುಗಿಯನ್ನು ತನ್ನ ಸೊಸೆಯನ್ನಾಗಿಸಬೇಕೆಂದು ಕನಸು ಕಂಡಿದ್ದ ತಾಯಿಗೆ, ತನ್ನ ಮಗ ಸಲಿಂಗಿಯನ್ನು ಮದುವೆಯಾಗಿ ಬಂದಾಗ ಹೇಗೆಲ್ಲಾ ಚಡಪಡಿಸುತ್ತಾರೆ, ಏನೆಲ್ಲಾ ಅವಮಾನ ಎದುರಿಸುತ್ತಾರೆ ಮತ್ತು ತನ್ನ ತಾಯಿ ಅಹಂ ಇಳಿಸಲು ಮಗ ಹಾಗೂ ಆತನ ಸ್ನೇಹಿತ ಏನೆಲ್ಲಾ ಸಂದರ್ಭಗಳನ್ನು ತಂದೊಡ್ಡುತ್ತಾರೆಂಬ ಅಂಶದೊಂದಿಗೆ ಇಡೀ ಚಿತ್ರ ಸಾಗುತ್ತದೆ.

ಚಿತ್ರದಲ್ಲಿ ಹಣ, ಆಸ್ತಿಗಿಂತ ಮನುಷ್ಯತ್ವ ಹಾಗೂ ಪ್ರೀತಿ ಮುಖ್ಯ ಎಂಬ ಒಂದು ಸಂದೇಶವಿದೆ. ಆ ಸಂದೇಶವನ್ನು ಕಾಮಿಡಿ ಸನ್ನಿವೇಶಗಳ ಮೂಲಕ ಹೇಳಲಾಗಿದೆ. ಚಿತ್ರದಲ್ಲೊಂದು ಲವ್‌ಸ್ಟೋರಿ ಇದ್ದರೂ ಅದು ಕಾಮಿಡಿಯ ಅಬ್ಬರದಲ್ಲಿ ಕಳೆದುಹೋಗಿದೆ. ಮೊದಲೇ ಹೇಳಿದಂತೆ ಒಂದೇ ವಿಷಯವನ್ನು ಬೇರೆ ಬೇರೆ ಸನ್ನಿವೇಶಗಳ ಮೂಲಕ ಹೇಳಲಾಗಿರುವುದರಿಂದ ಚಿತ್ರದಲ್ಲಿ ಏಕತಾನತೆ ಕಾಡುತ್ತದೆ. ಚಿತ್ರದಲ್ಲಿ ಇನ್ನೂ ಏನೋ ಬೇಕಿತ್ತು ಎಂಬ ಭಾವನೆ ಕೂಡಾ ಮೂಡದೇ ಇರದು.

Advertisement

ಇನ್ನು, ಪಡ್ಡೆಗಳನ್ನು ಸೆಳೆಯುವ ಸಲುವಾಗಿ ಸಾಕಷ್ಟು ಡಬಲ್‌ ಮೀನಿಂಗ್‌ ಸಂಭಾಷಣೆಗಳನ್ನು ಕೂಡಾ ಚಿತ್ರದಲ್ಲಿ ಬಳಸಲಾಗಿದೆ. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ ಟ್ರಿಮ್‌ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಇನ್ನೇನು ಸಿನಿಮಾ ಮುಗಿದೇ ಹೋಯಿತು ಎಂದು ಜನ ಸೀಟಿನಿಂದ ಎದ್ದೇಳುವಷ್ಟರಲ್ಲಿ ಫೈಟ್‌ವೊಂದು ಬರುತ್ತದೆ. ಹಾಗೆ ನೋಡಿದರೆ ಅದು ಸಿನಿಮಾಕ್ಕೆ ಅಗತ್ಯವಿರಲಿಲ್ಲ ಮತ್ತು ಒಂದು ವೇಳೆ ಬೇಕೆಂದಿದ್ದರೂ ಅದನ್ನು ಕ್ಲೈಮ್ಯಾಕ್ಸ್‌ ಮುಂಚೆ ಸೇರಿಸಬಹುದಿತ್ತು.

ಅದು ಬಿಟ್ಟರೆ ನಿಮಗೆ ಈ ಚಿತ್ರದಲ್ಲಿ ನಗುವುದಕ್ಕೆ ಸಾಕಷ್ಟು ಸನ್ನಿವೇಶಗಳು ಸಿಗುತ್ತವೆ. ಚಿತ್ರದಲ್ಲಿ ತನುಶ್‌ ನಾಯಕ. ಕಥೆ ಆರಂಭವಾಗೋದೇ ಅವರಿಗೆ ಹುಡುಗಿ ಹುಡುಕುವ ಮೂಲಕ. ಆದರೆ, ಸಿನಿಮಾದಲ್ಲಿ ತನುಶ್‌ಗಿಂತ ಹೆಚ್ಚು ಮಿಂಚಿದ್ದು ಕುರಿ ಪ್ರತಾಪ್‌. ಒಂದು ಹಂತಕ್ಕೆ ಈ ಸಿನಿಮಾದ ಹೀರೋ ಕುರಿ ಪ್ರತಾಪ್‌ ಎಂದು ಸಂದೇಹ ಬರುವಷ್ಟರ ಮಟ್ಟಿಗೆ ಅವರು ತೆರೆಯನ್ನು ಆವರಿಸಿಕೊಂಡಿದ್ದಾರೆ. ನಾಯಕ ತನುಶ್‌ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟನೆಯಲ್ಲಿ ಪಳಗಿದ್ದಾರೆ.

ಆ್ಯಕ್ಷನ್‌ ದೃಶ್ಯಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಮೊದಲೇ ಹೇಳಿದಂತೆ ಕುರಿ ಪ್ರತಾಪ್‌ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹೊಸ ಗೆಟಪ್‌ನಲ್ಲಿ ನಗಿಸುವ ಅವರ ಪ್ರಯತ್ನ ಇಲ್ಲೂ ಮುಂದುವರಿದೆ. ನಾಯಕಿ ಶ್ರಾವ್ಯಗೆ ಇಲ್ಲಿ ಹೆಚ್ಚೇನು ಅವಕಾಶವಿಲ್ಲ. ಹಾಡು ಹಾಗೂ ಕೆಲವೇ ಕೆಲವು ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಉಳಿದಂತೆ ಪದ್ಮಜಾ ರಾವ್‌, ಮಂಜುನಾಥ ಹೆಗಡೆ, ರಾಜೇಂದ್ರ ಕಾರಂತ್‌ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ನಂಜುಂಡಿ ಕಲ್ಯಾಣ
ನಿರ್ಮಾಣ: ಶಿವಣ್ಣ ದಾಸನಪುರ
ನಿರ್ದೇಶನ: ರಾಜೇಂದ್ರ ಕಾರಂತ್‌
ತಾರಾಬಳಗ: ತನುಶ್‌, ಶ್ರಾವ್ಯಾ, ಕುರಿ ಪ್ರತಾಪ್‌, ಪದ್ಮಜಾ ರಾವ್‌, ಮಂಜುನಾಥ  ಹೆಗಡೆ, ರಾಜೇಂದ್ರ ಕಾರಂತ್‌

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next