ಬೆಂಗಳೂರು: ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಸೀಟುಗಳ ಭರ್ತಿಗಾಗಿ ನಡೆಸುವ ಕಾಮೆಡ್-ಕೆ 2023ರ ಸಾಲಿನ ಪರೀಕ್ಷೆಯು ಭಾನುವಾರ ನಡೆಯಿತು.
ಭಾರತದಲ್ಲಿ 179 ನಗರಗಳಲ್ಲಿ 264 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.80.94 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬೆಂಗಳೂರಿನ 38 ಕೇಂದ್ರಗಳು ಸೇರಿ ಒಟ್ಟು 80 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ಶೇ.88.75 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆದಿದ್ದು, ಅಲ್ಲಲ್ಲಿ ಕೆಲ ತಾತ್ರಿಕ ಸಮಸ್ಯೆಗಳು ಕಾಣಿಸಿಕೊಂಡರೂ ಕಾಮೆಡ್- ಕೆ ತಕ್ಷಣವೇ ಅವುಗಳನ್ನು ಪರಿಹರಿಸಿದೆ. ತನ್ಮೂಲಕ ಪರೀಕ್ಷೆ ಹೆಚ್ಚು ಕಡಿಮೆ ಸುಸೂತ್ರವಾಗಿ ಸಾಗಿದೆ. ಕಾಮೆಡ್-ಕೆಗೆ ನೋಂದಾಯಿಸಿದ್ದ 96,607 ವಿದ್ಯಾರ್ಥಿಗಳ ಪೈಕಿ 78,250 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕರ್ನಾಟಕದಲ್ಲಿ 28,711 ವಿದ್ಯಾರ್ಥಿಗಳು ನೋಂದಾಯಿಸಿದ್ದು, 25,487 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಬಿಹಾರದ ಕೇಂದ್ರವೊಂದರಲ್ಲಿ ಬದಲಿ ವಿದ್ಯಾರ್ಥಿಯು ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದು, ತಕ್ಷಣ ಅವನ್ನು ಪತ್ತೆ ಮಾಡಿ ಪರೀಕ್ಷೆಯಿಂದ ಹೊರ ಕಳುಹಿಸಿದೆ. ವಿಜಯವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಚೀಟಿ ತಂದು ಸಿಕ್ಕಿ ಬಿದ್ದಿದ್ದು, ಅವರನ್ನು ಸಹ ಪರೀಕ್ಷೆಯಿಂದ ಹೊರಗೆ ಕಳುಹಿಸಲಾಗಿದೆ.
ಇನ್ನೂ ಬೆಂಗಳೂರಿನ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಒಂದು ಗಂಟೆ ತಡವಾಗಿ ಪರೀಕ್ಷೆ ಆರಂಭವಾಗಿದ್ದು, ಹೆಚ್ಚುವರಿ ಸಮಯ ನೀಡಲಾಗಿತ್ತು. ತಾತ್ಕಾಲಿಕ ಉತ್ತರವನ್ನು ಮೇ 30ರಂದು ಹಾಗೂ ಅಂತಿಮ ಉತ್ತರಗಳನ್ನು ಜೂ.6ರಂದು ಕಾಮೆಡ್-ಕೆ ಬಿಡುಗಡೆ ಮಾಡಲಿದೆ. ಜೂ.10ರಂದು ಸ್ಕೋರ್ ಕಾರ್ಡ್ ಬಿಡುಗಡೆ ಮಾಡುವುದಾಗಿ ಕಾಮೆಡ್-ಕೆ ಪ್ರಕಟಣೆ ತಿಳಿಸಿದೆ.