Advertisement

ನನ್ನ ಕನಸಿನ ಭಾರತದ ಸ್ವಾತಂತ್ರ್ಯ ಸೊಬಗನೋಡ ಬನ್ನಿ

08:01 PM Aug 16, 2020 | Karthik A |

ರತ್ನಾಕರಾ ಧೌತಪದಾಂ ಹಿಮಾಲಯ ಕಿರೀಟಿನೀಂ!
ಬ್ರಹ್ಮ ರಾಜರ್ಷಿರತ್ನಾಡ್ಯಾಂ ವಂದೇ ಭಾರತಮಾತರಂ !

Advertisement

(ಸಮುದ್ರರಾಜನಿಂದ ಪಾದ ತೊಳೆಸಿಕೊಂಡು, ಹಿಮಾಲಯವೆಂಬ ಕಿರೀಟವನ್ನು ಧರಿಸಿ ಉತ್ತಮೋತ್ತಮ ಅಸಂಖ್ಯ ಬ್ರಹ್ಮರ್ಷಿ ರಾಜರ್ಷಿ ರತ್ನವಜ್ರ ವೈಢೂರ್ಯಗಳಿಂದ ಅಲಂಕೃತಳಾಗಿರುವ ಮಹಾತಾಯಿ ಭಾರತಮಾತೆಗೆ ನಮ್ಮ ಪ್ರಣಾಮಗಳು )

ಸ್ವಾತಂತ್ರ್ಯವೆಂಬ ಅಮೂಲ್ಯ ಮಾಣಿಕ್ಯ ನಮ್ಮ ಕೈಗೆ ಸಿಕ್ಕ ದಿನದ ಆಚರಣೆ ಸಂತೋಷಪಡುವ ವಿಷಯವಷ್ಟೇ ಅಲ್ಲ.

ಅದು ನಮ್ಮೆಲ್ಲರ ಜವಾಬ್ದಾರಿಯನ್ನು ಎಚ್ಚರಿಸಬೇಕಾದ ದಿನವೂ ಆಗಿದೆ. ಸ್ವಾತಂತ್ರ್ಯ ಕೇವಲ ಆಚರಣೆಗೆ ಮಾತ್ರ ಸೀಮಿತ ವಾಗಿರಬಾರದು, ಬದಲಾಗಿ ದೇಶದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಕೆಲಸ ನಮ್ಮಿಂದಾಗಬೇಕು.

ಜನ್ಮಭೂಮಿ, ಮಾತೃಭೂಮಿ, ಕರ್ಮಭೂಮಿ, ಪುಣ್ಯಭೂಮಿ, ತ್ಯಾಗಭೂಮಿ, ಯಾಗಭೂಮಿ, ಯೋಗಭೂಮಿ ನಮ್ಮ ಭಾರತ. ಹೀಗೆ ನಮ್ಮ ಭಾರತದ ಶ್ರೇಷ್ಠತೆ ಧೀಮಂತಿಕೆ ಅಪಾರ.

Advertisement

ಊಹೆಗೂ ನಿಲುಕದ ವೈಭವೀಕರಣದ ಮಹಾಕ್ಷೇತ್ರ. ನದಿ ಸಾಗರಗಳು, ಪರ್ವತ ಗಿರಿಶ್ರೇಣಿ ಶೃಂಗಗಳು, ನಿತ್ಯಹರಿದ್ವರ್ಣ ವನರಾಶಿಗಳ ಸ್ವರ್ಗ ಸದೃಶ್ಯ ದೇವಭೂಮಿಯ ಸಮೃದ್ಧಿದಾಯಕ ಆವಾಸ ಸ್ಥಾನದಲ್ಲಿ ಋಷಿ ಮುನಿ ಸಾಧು ಸಂತ ವರೇಣ್ಯರು ಬಾಳಿ ಬದುಕಿ ಆದರ್ಶಯುತ ಜೀವನ ಮೌಲ್ಯಗಳನ್ನು ವಿಶ್ವಕ್ಕೇ ಸಾರಿದ ಪರಮ ಮಂಗಲ ಧಾಮವಿದು.

ಪ್ರಜಾಪ್ರಭುತ್ವದ ರಾಷ್ಟ್ರೀಯತೆ, ಸಂವಿಧಾನದ ಪರಿಕಲ್ಪನೆ, ಸಮಾಜವಾದ ಸಮಾನತೆಯ ವಿಶಾಲ ಮನೋಭಾವ, ಏಕತೆ ಸಂಸ್ಕೃತಿಯ ಅಖಂಡತೆ, ದೇಶದ ಕುರಿತಾದ ಅಪಾರ ಅಭಿಮಾನ ಹೀಗೆ ಭಾರತವನ್ನೇ ಸರ್ವಸ್ವವಾಗಿರಿಸಿದ ಸರ್ವ ಭಾರತೀಯರಲ್ಲೂ ತಾಯಿ ಭಾರತಿ ಜಾಗೃತಳಾಗಿದ್ದಾಳೆ. ವಿಶ್ವದ ಯಾವ ಭಾಗಗಳಲ್ಲಿಯೂ ಯಾವ ಮೂಲೆಗಳಲ್ಲಿಯೂ ಕಾಣ ಸಿಗದ ದೇಶಭಕ್ತಿ, ನಾಡು ನುಡಿಯ ಬಗೆಗಿನ ಪ್ರೀತಿ, ಸ್ಪಂದನೆ ಹಾಗೂ ಅಂತಃಕ‌ರಣ ಸೇವಾತತ್ಪರತೆಯ ವಿಶಾಲ ಮನೋಭಾವ ಕಾಣಿಸಲ್ಪಡುವುದೆಂದರೆ ಅದು ನಮ್ಮ ಭರತ ಭೂಮಿಯಲ್ಲಿ ಮಾತ್ರ. ದೇವಾನುದೇವತೆಗಳು ಅವತರಿಸಿದ ಈ ಮಣ್ಣಿನಲ್ಲಿ ಹಲವು ಜಾತಿ, ಮತ, ಧರ್ಮೀಯರು ವಿವಿಧತೆಯಲ್ಲಿ ಏಕತೆಯನ್ನು ಕಂಡು ಸರ್ವ ಧರ್ಮ ಸಹಿಷ್ಣುತೆಯಿಂದ ಬಾಳಿ “ವಸುಧೈವ ಕುಟುಂಬಕಂ’ ಎಂಬ ತತ್ತ್ವವನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿ ಈ ಸಂಭ್ರಮ ಕೇವಲ ಆಚರಣೆಗಷ್ಟೇ ಸೀಮಿತವಾಗಿರಬಾರದು. ದೇಶಪ್ರೇಮ ಕೇವಲ ಘೋಷಣೆಗಳಲ್ಲಿ ಹಾಗೂ ಸಾಹಿತ್ಯದ ಬರಹಗಳಿಗೆ ಸೀಮಿತವಾಗದಂತೆ ನೋಡಿಕೊಳ್ಳಬೇಕು. ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ನೆತ್ತರು, ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿರುವ ಪ್ರಜೆಗಳ ಪರಿಶ್ರಮದ ಬೆವರು ಎಂದಿಗೂ ವ್ಯರ್ಥವಾಗಬಾರದು.

ನಾವು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ದೇಶ ಕಟ್ಟಲು ನಮ್ಮ ಕೊಡುಗೆ ಏನು? ವಸತಿ, ವಿದ್ಯೆ, ನಿವಾಸ, ಸಾರ್ವಜನಿಕ ಸೌಲಭ್ಯಗಳನ್ನು ಪಡೆದುಕೊಂಡ ನಾವುಗಳು, ನಮ್ಮದೇಶಕ್ಕಾಗಿ, ದೇಶದ ಪ್ರಗತಿಗಾಗಿ, ರಾಷ್ಟ್ರದ ಬಲ ಸಂವರ್ಧನೆಗಾಗಿ ನಮ್ಮ ಸೇವೆಯೇನೆಂಬುದನ್ನು ಮೊದಲು ಅರಿತು ಕೊಳ್ಳಬೇಕಾಗಿದೆ. ಕೈಚಾಚುವ ಬದಲು ಕೈ ಜೋಡಿಸಿದರೆ ಮಾತ್ರ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬಲ್ಲೆವು.

ನಮ್ಮ ದೇಶದ ಸಂವಿಧಾನದ ಸಾಲುಗಳು ಪ್ರಾರಂಭವಾಗುವುದೇ ಭಾರತದ ಪ್ರಜೆಗಳಾದ ನಾವು..ಪ್ರಜೆಗಳನ್ನೇ ಪ್ರಭುಗಳನ್ನಾಗಿ ಕಾಣುವ ವಿಶ್ವದ ಏಕೈಕ ದೇಶವೆಂದರೆ ಅದು ನಮ್ಮ ಭಾರತ.

ಎಲ್ಲೆಲ್ಲೂ ಸಡಗರ ಸಂಭ್ರಮದಿಂದ ಆಚರಿಸಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಗೆ ಈ ಬಾರಿ ಕೊರೊನಾ ಸೊಂಕಿನ ಸಮಸ್ಯೆ ಎದುರಾಗಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಉತ್ಸಾಹ ಹುಮ್ಮಸ್ಸು ಕುಗ್ಗಲು ಸಾಧ್ಯವೇ? ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕೊರೊನಾ ವಾರಿಯರ್‌ಗಳಾದ ವೈದ್ಯರು, ಶುಶ್ರೂಷಕರು, ಪೌರಕಾರ್ಮಿಕರು ಮತ್ತು ಸೋಂಕಿನಿಂದ ಗುಣಮುಖರಾದವರನ್ನು ಆಹ್ವಾನಿಸಿ ಗೌರವಿಸಿ ಆತ್ಮಸ್ಥೈರ್ಯವನ್ನು ತುಂಬಿ ವಿನೂತನ ರೀತಿಯಲ್ಲಿ ಸ್ವಾತಂತ್ರ್ಯವನ್ನು ಆಚರಿಸೋಣ. ಈ ಎಲ್ಲ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೇ ಅದೇ ನಮ್ಮ ಸ್ವಾತಂತ್ರ್ಯದ ಸೊಬಗು ಯೋಗಯುಕ್ತ ಭಾರತ ರೋಗಮುಕ್ತವಾಗಲಿ. ಸ್ವಾವಲಂಬಿ ನವ ಭಾರತ ನಮ್ಮ ಗುರಿಯಾಗಲಿ.

ಸ್ವಾತಿ ರಾವ್‌ ಮಂಗಳಾದೇವಿ, ಬೆಸೆಂಟ್‌ ಕಾಲೇಜು, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next