ನಿನ್ನ ಮಾತುಗಳನ್ನೇ ಉಸಿರಾಡಿಕೊಂಡಿದ್ದ ನಾನೀಗ ಗಾಳಿ ಇಲ್ಲದ ಚಕ್ರದಂತಾಗಿದ್ದೇನೆ. ನನ್ನೊಳಗಿನ ಜೀವತಂತಿ ಸತ್ತೇ ಹೋಗಿದೆಯೇನೋ ಅನಿಸುತ್ತಿದೆ. ಪ್ಲೀಸ್, ಹೀಗೆ ಮಾಡಬೇಡ. ವಾಪಸ್ ಬಂದುಬಿಡು..
ಕಿಚ್ಚು ಹತ್ತಿಸಿ, ಸಫಲವಾಗುವ ಪ್ರೀತಿಯನ್ನು ವಿಫಲವಾಗಿಸಿಬಿಟ್ಟೆ. ಇದು ಹೀಗೆಲ್ಲಾ ಆಗುತ್ತದೆ ಅಂತ ನಾನಂತೂ ಅಂದುಕೊಂಡಿರಲಿಲ್ಲ. ನಾವು ಅಂದುಕೊಂಡಿದ್ದೆಲ್ಲಾ ಆಗೋದಾದ್ರೆ ಪ್ರೀತಿಗೆಲ್ಲಿ ಮಹತ್ವವಿರುತ್ತಿತ್ತು ಹೇಳು?
ಪ್ರೀತಿ, ಜೀವನದಲ್ಲಿ ಆಗಾಧ ಬದಲಾವಣೆ ತರುತ್ತದೆ ನಿಜ. ಅದು, ಮರೆಯಲಾರದ ನೋವನ್ನೂ ಎದೆಯಲ್ಲಿ ಉಳಿಸಿ ಹೋಗಿಬಿಡುತ್ತದೆ. ಮೊದಲಿನ ಆತ್ಮೀಯತೆ ಮೃದು ಬೆಣ್ಣೆಯಂತೆ ಇತ್ತು. ಈಗ ನೋಡಿದರೆ ಹರಿತ ಚೂರಿಯಾಗಿದೆ. ತುಂಬಾ ಬದಲಾವಣೆಗೆ ಕಾರಣ, ನಿನ್ನ ಅಂತಸ್ತಿನ ಅಹಮ್ಮೇ ಅಥವಾ ಚಾಡಿಕೋರರು ಹೇಳಿದ ಮಾತುಗಳೇ? ಇಂದಿಗೂ ನನ್ನಲ್ಲಿ ಪ್ರಶ್ನೆಯಾಗಿ ಉಳಿದಿವೆ. ಅವು ದಿನವೂ ಹರಿತ ಅಲುಗಿನಂತೆ ನನ್ನನ್ನು ಚುಚ್ಚುತ್ತಲೇ ಇವೆ.
ಮೊದಲು ಮಾತಿನಮಲ್ಲಿಯಾಗಿದ್ದ ನೀನು, ಆನಂತರದಲ್ಲಿ ನನಗೆ ಮೊಟಕಾಗಿಸಿ ಉತ್ತರ ನೀಡುವುದನ್ನು, ಪ್ರತಿಕ್ರಿಯೆ ನೀಡುವುದನ್ನು ರೂಢಿಸಿಕೊಂಡೆ. ಯಾಕೆ ಅಂತ ನನಗೆ ಅರ್ಥವಾಗಲಿಲ್ಲ. ಅದಕ್ಕೇ ನಾನು, ಯಾಕೋ ನೀನು ಮೊದಲಿನಂತಿಲ್ಲ? ಎಂದು ಕೇಳಿಬಿಟ್ಟೆ. ಅದೊಂದು ಪ್ರಶ್ನೆಯೇ ಪ್ರೀತಿಗೆ ಮುಳುವಾಯಿತೇ? ಅಷ್ಟಕ್ಕೇ ನೀನು ಮಾತಿಗೆ ಪೂರ್ಣವಿರಾಮವನ್ನೇ ಇಟ್ಟುಬಿಡುತ್ತೀಯಾ ಎಂದು ನಾನು ಕಲ್ಪಿಸಿಕೊಂಡಿರಲಿಲ್ಲ.
ಯಾಕೆಂದರೆ, ನೀನು ಮಾತಿನಮಲ್ಲಿ. ಮಾತಾಡಿ ಮಾತಾಡಿ ತಲೆನೋವು ತರಿ¤àಯ ನಂಗೆ ಅಂತ ಈ ಮೊದಲು ನಾನೇ ನಿನಗೆ ಒಂದೆರಡಲ್ಲ; ನೂರಾರು ಬಾರಿ ಹೇಳಿದ್ದೆ. ಆಗೆಲ್ಲಾ ನೀನು ಮುಸಿಮುಸಿ ನಗುತ್ತಾ- ಕಳ್ಳ, ಹಾಗೆಲ್ಲಾ ಅಂತೀಯೇನೋ ಅನ್ನುತ್ತಾ, ಹುಸಿಮುನಿಸು ತೋರುತ್ತಾ, ತಲೆ ಮೇಲೆ ಮೊಟಕುತ್ತಿದ್ದೆ. ಆನಂತರದಲ್ಲಿ ಎಂದಿನಂತೆ ನಮ್ಮ ಹರಟೆ ಮುಂದುವರಿಯುತ್ತಿತ್ತು. ವಾಸ್ತವ ಹೀಗಿದ್ದಾಗ, ನೀನು ಮಾತು ನಿಲ್ಲಿಸ್ತೀಯಾ, ಅದೂ ನನ್ನೊಂದಿಗೆ ಎಂದರೆ ನಂಬೋದಿಕ್ಕೆ ಸಾಧ್ಯವಾ? ನಿನ್ನ ಮಾತುಗಳನ್ನೇ ಉಸಿರಾಡಿಕೊಂಡಿದ್ದ ನಾನೀಗ ಗಾಳಿ ಇಲ್ಲದ ಚಕ್ರದಂತಾಗಿದ್ದೇನೆ. ನನ್ನೊಳಗಿನ ಜೀವತಂತಿ ಸತ್ತೇ ಹೋಗಿದೆಯೇನೋ ಅನಿಸುತ್ತಿದೆ. ಪ್ಲೀಸ್, ಹೀಗೆ ಮಾಡಬೇಡ. ವಾಪಸ್ ಬಂದುಬಿಡು.. ಬರುವಾಗ ಮಾತ್ರ ಮುಖ ಊದಿಸಿಕೊಂಡೇ ಬಾ, ಆಗ ಮತ್ತಷ್ಟು ಮುದ್ದಾಗಿ ಕಾಣಿಸ್ತೀಯ.
ನಿನ್ನ ವದನಾಕಾಂಕ್ಷಿ
ಹನುಮಂತ.ಮ.ದೇಶಕುಲಕರ್ಣಿ