Advertisement

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

12:03 AM Oct 27, 2020 | mahesh |

ಉಡುಪಿ: ಬಾಗಲಕೋಟೆಯ ಹಾನಗಲ್‌ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಎಸ್‌ಸಿ ನರ್ಸಿಂಗ್‌ ಪ್ರಥಮ ವರ್ಷದ ವಿದ್ಯಾರ್ಥಿ ಶಶಿ ಕುಮಾರ್‌ (ಬುಡ್ಡನ ಗೌಡ) ಉಡುಪಿಯಲ್ಲಿ ಕೂಲಿ ಕೆಲಸ ನಿರತರಾಗಿದ್ದಾರೆ. ಅವರು ಇಲ್ಲಿಗೆ ಬಂದು ದುಡಿಯು ತ್ತಿರುವುದು ಶಿಕ್ಷಣವಂಚಿತರಾಗಿ ಅಲ್ಲ; ಕೋರ್ಸ್‌ಗೆ ಪ್ರವೇಶ ಪಡೆದಿದ್ದು, ಅದರ ಶುಲ್ಕ ಒಟ್ಟುಗೂಡಿಸುವುದಕ್ಕಾಗಿ!

Advertisement

ಬಿಎಸ್‌ಸಿ ನರ್ಸಿಂಗ್‌ ಕೋರ್ಸ್‌ ಶುಲ್ಕ ಸುಮಾರು 60 ಸಾವಿರ ರೂ. ಗಳಿಸುವುದಕ್ಕಾಗಿ ಶಶಿಕುಮಾರ್‌ ಒಂದು ತಿಂಗಳಿಂದ ಕೂಲಿ ಮಾಡುತ್ತಿದ್ದಾರೆ. ಇವರ ತಂದೆ ಚಂದಪ್ಪ 20 ವರ್ಷಗಳಿಂದ ಉಡುಪಿ ಕರಾವಳಿ ಬೈಪಾಸ್‌ ಬಳಿ ವಾಸವಿದ್ದಾರೆ. ತಂದೆಯ ಸಂಪರ್ಕ ದಿಂದ ಮಗನಿಗೂ ಕೂಲಿ ಕೆಲಸ ಸಿಗುತ್ತಿದೆ. ಕಾಲೇಜು ಆರಂಭ ವಾಗುವುದಕ್ಕೆ ಮುನ್ನ 15 ರಿಂದ 20 ಸಾವಿರ ರೂ. ಸಂಪಾದಿಸಬಹುದು ಎಂಬ ವಿಶ್ವಾಸ ಶಶಿಕುಮಾರ್‌ ಅವರದು. ಪ. ಪಂಗಡದವರಾದ ಕಾರಣ ಸುಮಾರು 20 ಸಾವಿರ ರೂ. ವಿದ್ಯಾರ್ಥಿವೇತನ ಸಿಗುವ ಸಾಧ್ಯತೆ ಇದೆ.

ಬರುವುದು ತಡವಾಯಿತು
ಈ ವರ್ಷ ನೀಟ್‌, ಸಿಇಟಿ ಪರೀಕ್ಷೆ, ಪಿಯುಸಿ ಇಂಗ್ಲಿಷ್‌ ಪರೀಕ್ಷೆಗಳಿದ್ದ ಕಾರಣ ಉಡುಪಿಗೆ ಬರುವುದು ತಡವಾಯಿತು. ಇಲ್ಲವಾಗಿದ್ದರೆ ಸುಮಾರು 40 ಸಾವಿರ ರೂ. ಸಂಗ್ರಹಿಸಬಹುದಿತ್ತು. ನಮ್ಮ ಕಡೆ ಉಡುಪಿ ರೀತಿಯಲ್ಲ. ಕೇವಲ ಶಾಲೆಯ ಓದಿನಿಂದಲೇ ನೀಟ್‌, ಸಿಇಟಿ ಪರೀಕ್ಷೆ ಎದುರಿಸಬೇಕು; ಹೆಚ್ಚುವರಿ ತರಬೇತಿ ಇಲ್ಲ. ಹೀಗಾಗಿ ನನಗೆ ನಿರೀಕ್ಷಿತ ರ್‍ಯಾಂಕಿಂಗ್‌ ಸಿಗಲಿಲ್ಲ. ವೈದ್ಯನಾಗುವ ಆಕಾಂಕ್ಷೆ ಹೊಂದಿದ್ದೆ. ಈಗ ಅದಕ್ಕೆ ಸಂಬಂಧಪಟ್ಟದ್ದೇ ಆದ ಬಿಎಸ್‌ಸಿ ನರ್ಸಿಂಗ್‌ ಕೋರ್ಸ್‌ ಆಯ್ದು ಕೊಂಡಿದ್ದೇನೆ ಎನ್ನುತ್ತಾರೆ ಶಶಿಕುಮಾರ್‌.

ಬಾಗಲಕೋಟೆಯಲ್ಲಿ ಎಬಿವಿಪಿಯ ವರು ಬಡ ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್‌ ನೀಡುತ್ತಿದ್ದರು. ಈ ಬಾರಿ ಕೊರೊನಾದಿಂದ ಅದಕ್ಕೂ ಕುತ್ತು ಬಂತು. ಇಲ್ಲವಾಗಿದ್ದರೆ ಅಂಕ ಗಳಿಕೆಯಲ್ಲಿ ಸಾಧನೆ ಸಾಧ್ಯವಾಗುತ್ತಿತ್ತು. ಈಗ ಕೋರ್ಸ್‌ ಪ್ರವೇಶದ ಬಳಿಕವೂ ಆನ್‌ಲೈನ್‌ ಕ್ಲಾಸ್‌ ಕೂಡ ನಡೆದಿಲ್ಲ ಎಂದು ಶಶಿಕುಮಾರ್‌ ಹೇಳಿದ್ದಾರೆ.

“ಇಂತಹ ವಿದ್ಯಾರ್ಥಿಗಳು ಸ್ವಾಭಿಮಾನಿಗಳು. ಕಷ್ಟಪಟ್ಟು ಓದುವ ಮಹತ್ವಾಕಾಂಕ್ಷೆ ಇದೆ. ಇಂತಹವರಿಗೆ ನಾವು ಪ್ರೋತ್ಸಾಹ ನೀಡಬೇಕಾಗಿದೆ’ ಎಂದು ತಮ್ಮ ಮನೆಗೆ ಕೆಲಸಕ್ಕೆ ಬಂದಿದ್ದ ಶಶಿಕುಮಾರ್‌ ಕುರಿತು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಎ.ಪಿ. ಭಟ್‌ ಅವರು ಅಭಿಮಾನ ದಿಂದ ಹೇಳುತ್ತಾರೆ.

Advertisement

ಹಿಂದೆಯೂ ನೆರವಾಗಿದ್ದ ದುಡಿಮೆ
2 ವರ್ಷಗಳ ಹಿಂದೆ ಪ.ಪೂರ್ವ ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭ ದಲ್ಲಿಯೂ ಶಶಿಕುಮಾರ್‌ ಕೂಲಿ ಕೆಲಸ ಮಾಡಿ ಶುಲ್ಕ ಹೊಂದಿಸಿದ್ದರು. ಆಗಲೂ ಅವರು ಉಡುಪಿಗೆ ಬಂದು ದುಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next