ಧಾರವಾಡ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ವಿಚಾರದಲ್ಲಿ ನ್ಯಾಯ ಕೇಳಲು ಬ್ರಾಹ್ಮಣರು ಮತ್ತು ಲಿಂಗಾಯತರು ಇಲ್ಲದೇ ಇರುವ 8 ಜನರ ಸಮಿತಿ ರಚಿಸುತ್ತೇವೆ. ಅವರು ಸಮಗ್ರವಾಗಿ ಅಧ್ಯಯನ ಮಾಡಿ ಕಾನೂನು ಹೋರಾಟ ನಡೆಸುತ್ತಾರೆ.
ಕೇಂದ್ರ ಸರ್ಕಾರ ಒಪ್ಪದೇ ಹೋದರೆ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ ಎಂದು ರಾಷ್ಟ್ರೀಯ
ಜಾಗತಿಕ ಲಿಂಗಾಯತ ಮಹಾಸಭಾಮಹಾಪ್ರಧಾನ ಕಾರ್ಯದರ್ಶಿ ಡಾ|ಎಸ್.ಎಂ.ಜಾಮದಾರ ಹೇಳಿದರು.
ನಗರದ ಮುರುಘಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಲಿಂಗಾಯತ ಧರ್ಮ-ಚಿಂತನಾಗೋಷ್ಠಿ’ಯಲ್ಲಿ ಮಾತನಾಡಿದ ಅವರು, ಲಿಂಗಾಯತ ವಿರಕ್ತಮಠಗಳಿಗೆ ವೀರಶೈವ ಪರಂಪರೆಯನ್ನು ಥಳಕು ಹಾಕುವ ಪ್ರಯತ್ನ ನಡೆದಿದೆ. ಈ ಕುರಿತು ವಿರಕ್ತರು ಕಟ್ಟುನಿಟ್ಟಾಗಿ ಮಠಗಳನ್ನು ಮರಳಿ ವಿರಕ್ತ ಪರಂಪರೆಯತ್ತ ಕೊಂಡೊಯ್ಯಬೇಕಿದೆ. ಧರ್ಮ ಒಡೆಯುತ್ತೇವೆಂದು ಏಳು ಜನ ಸ್ವಾಮೀಜಿಗಳ ಮೇಲೆ ಪಂಚಪೀಠಾಧೀಶರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾವು ಕೂಡ ಪಂಚಪೀಠಾಧೀಶರ ಮೇಲೆ ಪ್ರಕರಣಗಳನ್ನು ದಾಖಲಿಸುತ್ತೇವೆ ಎಂದರು.
ವೀರಶೈವ ಮಹಾಸಭೆ ಮುಖಂಡರಾದ ಶಾಮನೂರ ಶಿವಶಂಕರಪ್ಪ ಲಿಂಗಾಯತ ಸಾದರ, ಈಶ್ವರ ಖಂಡ್ರೆ ಬಣಜಿಗರು, ಎನ್.ತಿಪ್ಪಣ್ಣ ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿದ್ದು, ಇವರಲ್ಲಿ ವೀರಶೈವರು ಯಾರೂ ಇಲ್ಲ. ಅಷ್ಟೇ ಅಲ್ಲ, ಪಂಚಪೀಠಾಧೀಶರ ಜನನ ಪ್ರಮಾಣ ಪತ್ರಗಳಲ್ಲಿ ಕೂಡ ಲಿಂಗಾಯತ ಎಂದೇ ಇದೆ ಎಂದು ಜಾಮದಾರ ಹೇಳಿದರು.
ಜನನ, ಲಿಂಗದೀಕ್ಷೆ, ಮದುವೆ ಮತ್ತು ಸಾವು ಈ ನಾಲ್ಕು ಸಂಸ್ಕಾರಗಳು ಮಾತ್ರ ಲಿಂಗಾಯತರಲ್ಲಿದ್ದವು. ಆದರೆ
ಕೆಲವಷ್ಟು ಜನರು 16 ಸಂಸ್ಕಾರಗಳನ್ನು ಲಿಂಗಾಯತರ ಕೊರಳಿಗೆ ಹಾಕಿದ್ದಾರೆ. ಹೀಗಾಗಿ, ಲಿಂಗಾಯತ ಧರ್ಮದ
ಸಂಸ್ಕಾರ ಕೊಡಲು ಹೊಸ ಸಂಸ್ಥೆಯನ್ನು ಆರಂಭಿಸಲಾಗುವುದು ಎಂದು ಜಾಮದಾರ ಹೇಳಿದರು.