Advertisement

Color Paradise: 1999ರಲ್ಲಿ ತೆರೆ ಕಂಡ “ಕಲರ್‌ ಪ್ಯಾರಡೈಸ್‌”

04:12 PM Sep 05, 2024 | Team Udayavani |

ಇರಾನಿನ ಚಿತ್ರ ನಿರ್ದೇಶಕ ಮಜಿದ್‌ ಮಜಿದಿ ರೂಪಿಸಿರುವ ಸಿನಿಮಾ. 1999ರಲ್ಲಿ ತೆರೆ ಕಂಡದ್ದು. ಸಂಬಂಧಗಳಲ್ಲಿ ಸೂಕ್ಷ್ಮತೆಯನ್ನು ಹೇಳುವುದು ಅಥವಾ ಕಟ್ಟಿಕೊಡುವುದು ಅತ್ಯಂತ ಕಷ್ಟದ ಹಾಗೂ ನಾಜೂಕಿನ ಕೆಲಸ. ಅದನ್ನು ಯಾವಾಗಲೂ ಸಮರ್ಥವಾಗಿ ಮಜಿದ್‌ ಮಜಿದಿ ಮಾಡಬಲ್ಲರು. ಈ ಮಾತು ಅವರ ಚಿಲ್ಡ್ರನ್‌ ಆಫ್ ಹೆವನ್‌ನಿಂದ ಹಿಡಿದು ಹಲವು ಸಿನಿಮಾಗಳಲ್ಲಿ ಸಾಬೀತಾಗಿದೆ.

Advertisement

ದಿ ಕಲರ್‌ ಆಫ್ ಪ್ಯಾರಡೈಸ್‌ ಶೀರ್ಷಿಕೆಯೇ ಹೇಳುವಂತೆ ಸ್ವರ್ಗದ ಬಣ್ಣ ಯಾವುದು ಎನ್ನುವ ಕುತೂಹಲ ನಮ್ಮಲ್ಲಿ ಅರಳಿಸುವುದಿಲ್ಲವೇ. ಬದುಕಿನ ಉತ್ಸಾಹದ, ಜೀವನ ಪ್ರೀತಿಯ ಬಣ್ಣದ ಬಗ್ಗೆ ಪ್ರಶ್ನೆ ಎತ್ತಿದಾಗಲೂ ಅಷ್ಟೇ. ಅದೇ ಬಗೆಗಿನ ಬೆರಗು ಇದ್ದದ್ದೇ.

ಈ ಸಿನಿಮಾದಲ್ಲೂ ಮಜಿದ್‌ ಹೇಳಲು ಪ್ರಯತ್ನಿಸುವುದು ಮಾನವ ಸಂಬಂಧಗಳ ಬಣ್ಣದ ಕುರಿತಾಗಿಯೇ. ಅಂಧ ಬಾಲಕನೊಬ್ಬ (ಮೊಹಮ್ಮದ್‌) ಬದುಕನ್ನು ಪ್ರೀತಿಸುವ ಬಗೆ, ಆ ಅನನ್ಯತೆಯನ್ನು ಹೇಳಲು ಪ್ರಯತ್ನಿಸಿದ್ದಾನೆ ಮಜಿದ್‌. ಅಂಧನಾದರೂ ಒಳಗಣ್ಣಿನಿಂದಲೇ ಬದುಕಿನ ಸೌಂದರ್ಯವನ್ನು ತುಂಬಿಕೊಳ್ಳುತ್ತಾ, ಬಣ್ಣವನ್ನು ಬದುಕಿಗೆ ತುಂಬಿಕೊಳ್ಳುತ್ತಾ ಪ್ರಕೃತಿಯ ಪ್ರತಿ ಕಣ ಕಣವನ್ನೂ ಆನುಭವಿಸಲು ಪ್ರಯತ್ನಿಸುತ್ತಾನೆ. ದುಃಖ, ಸಂತೋಷಗಳನ್ನು ಅನುಭವದ ನೆಲೆಯಲ್ಲೇ ಗ್ರಹಿಸಲು ಯತ್ನಿಸುತ್ತಾ ಬದುಕಿನ ಸಾಧ್ಯತೆಗಳತ್ತ ಹೊರಳುತ್ತಾನೆ.

ಕರ್ಣ, ದೃಷ್ಠಿಗಿಂತ ಬದುಕನ್ನು ಅನುಭವಿಸಲು ಸೃಷ್ಠಿಯ ಆಗಾಧ ಸಾಧ್ಯತೆಯನ್ನು ತನ್ನೊಳಗೆ ಮರು ಸೃಷ್ಠಿಸುವ ಸಾಮರ್ಥ್ಯ ಇದ್ದವರು ಮಾತ್ರ ಬದುಕನ್ನು ಪೂರ್ತಿಯಾಗಿ ಅನುಭವಿಸಬಲ್ಲರು. ನದಿಯ ಹರವಿನ ನಾದವನ್ನು ಗ್ರಹಿಸಲು ಸಂಗೀತ ತಿಳಿಯುವುದಕ್ಕಿಂತ ಬದುಕಿನ ಲಯ ತಿಳಿದಿದ್ದರೆ ಸಾಕು. ಮೊಹಮ್ಮದ್‌ ಮತ್ತು ಮಜಿದ್‌ ಮಜಿದಿ ಈ ಸಿನಿಮಾದ ಮೂಲಕ ನಮಗೆ ಕಲಿಸಲು ಪ್ರಯತ್ನಿಸಿರುವುದು ಇದನ್ನೇ.

Advertisement

ಮಗನ ಕುರುಡುತನವೇ ತನ್ನ ಸುಖಕ್ಕೆಲ್ಲ ದೊಡ್ಡ ಅಡ್ಡಿ ಎನ್ನುವಂತೆ ಕಾಣುವ ಅಪ್ಪನಿಗೆ ಸಂಬಂಧದ ಮಹತ್ವವನ್ನೂ ಹೇಳುವ ಮೊಹಮ್ಮದ್‌, ಕೊನೆಗೂ ಕಲಿಸುವುದು ಬದುಕನ್ನು ಆಗಾಧವಾಗಿ ಪ್ರೀತಿಸುವುದನ್ನೇ. ಪುರಸ್ಕಾರಗಳನ್ನು ಪಡೆದಿರುವ ಈ ಸಿನಿಮಾ ನಮ್ಮೊಳಗಿನ ಸಣ್ಣ ವಿಷಾದಕ್ಕೆ ನೀರು ಸುರಿಯುತ್ತದೆ. ಸಂಬಂಧಗಳ ಮಳೆಯಲ್ಲಿ ಒದ್ದೆಯಾಗಿಸಬಲ್ಲ ಶಕ್ತಿ ಇರುವಂಥ ಸಿನಿಮಾ.

-ಅಪ್ರಮೇಯ

Advertisement

Udayavani is now on Telegram. Click here to join our channel and stay updated with the latest news.

Next