Advertisement

ನೀಲಿ ಆಗಸದಲ್ಲಿ ಬಣ್ಣ-ಬಣ್ಣದ ಚಿತ್ತಾರ

09:29 PM Jan 26, 2020 | Lakshmi GovindaRaj |

ಚಾಮರಾಜನಗರ: ನೀಲಿ ಆಗಸವನ್ನು ಬಣ್ಣ-ಬಣ್ಣದ ಗಾಳಿಪಟಗಳು ಆವರಿಸಿದ್ದವು. ಒಂದು ನಕ್ಷತ್ರಾಕಾರವಾಗಿದ್ದರೆ, ಮತ್ತೂಂದು ಚೌಕಾಕಾರವಾಗಿದ್ದವು. ಮತ್ತನೇಕ ತರಹೇವಾರಿ ಆಕೃತಿಗಳು. ಈ ಮೂಲಕ ಪಟಗಳು ಬಣ್ಣದ ಲೋಕವನ್ನೇ ಸೃಷ್ಟಿಸಿದ್ದವು..

Advertisement

ಈ ದೃಶ್ಯ ಕಂಡು ಬಂದದ್ದು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ 31ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವದಲ್ಲಿ ತಿಂಗಾಳು ಮುಳುಗಿದಾವೋ ಬಾನಂಗಳದಲ್ಲಿ ಪಟದ ಚಿತ್ತಾರ ಬೆಳಗಿದವೋ ಎಂಬ ಪರಿಕಲ್ಪನೆಯಡಿ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಸಂಯುಕ್ತಾ ಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಗಾಳಿಪಟ ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಟ್ರಸ್ಟಿ ಆದಿತ್ಯ ನಂಜರಾಜ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ‌ ಕೆ.ಎಸ್‌.ಮಹೇಶ್‌, ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌.ಶೋಭಾ, ಉಪಾಧ್ಯಕ್ಷ ಜಿ. ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಚ್‌. ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಕರ್ನಾಟಕ ಜಾನಪದ ಲೋಕದ ಆಡಳಿತಾಧಿಕಾರಿ ಬಸವರಾಜು, ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಸವರಾಜು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ
ಚಾಮರಾಜನಗರ: ಗಾಳಿಪಟ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಿದ್ದರೂ, ಇದಕ್ಕೆ ಮತ್ತಷ್ಟು ಕಳೆ ನೀಡುವ ಉದ್ದೇಶದಿಂದ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Advertisement

12 ವರ್ಷದೊಳಗಿನ ಕಿರಿಯರಿಗೆ, 13 ರಿಂದ 21 ವರ್ಷ, 22 ವರ್ಷ ಮೇಲ್ಪಟ್ಟವರಿಗೆ ಹಾಗೂ ಗುಂಪು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.

ಚಿಣ್ಣರ ಪತಂಗ: ಗಾಳಿಪಟ ಉತ್ಸವದಲ್ಲಿ ಶಾಲಾಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ತಾವೇ ಕಟ್ಟಿದ ವೃತ್ತಾಕಾರದ, ಎಲೆಯ ರೀತಿಯ, ಆನಿಮೇಷನ್‌ ಪಾತ್ರಗಳನ್ನು ಹೋಲುವ ಅನೇಕ ಪತಂಗಗಳು ಬಾನಂಗಳವನ್ನು ತುಂಬಿದವು. ಇದು ಮಕ್ಕಳ ಸೃಜನಾತ್ಮಕ ಅನಾವರಣಕ್ಕೆ ವೇದಿಕೆಯಾಯಿತು.

ಸಾಮಾಜಿಕ ಕಳಕಳಿ ಪಟಗಳು: ಸಾಮಾನ್ಯ ರೀತಿಯ ಗಾಳಿಪಟಗಳಷ್ಟೇ ಅಲ್ಲದೇ ಸಾಮಾಜಿಕ ಕಳಕಳಿ ಸಾರುವ ಪಟಗಳು ಉತ್ಸವದಲ್ಲಿ ಕಂಗೊಳಿಸಿದವು. ಹೆಣ್ಣು ಭ್ರೂಣ ಹತ್ಯೆ ತಡೆ ಸಂದೇಶ ಇರುವ ಗಾಳಿಪಟ ಎಲ್ಲರ ಗಮನ ಸೆಳೆಯಿತು. ಜತೆಗೆ ಕಾಡು ಉಳಿಸಿ, ಹಸಿರು ಬೆಳೆಸಿ, ತಾಯಿ, ಕಬಡ್ಡಿ ನಮ್ಮ ಕ್ರೀಡೆ ಶೀರ್ಷಿಕೆ ಒಳಗೊಂಡ ಪಟಗಳು ಮನಸೂರೆಗೊಂಡವು. ಇದರ ಜತೆಗೆ ನಾಡಿನ ಸಂಸ್ಕೃತಿ ಸಾರುವ ತಾಯಿ ಭುವನೇಶ್ವರಿ, ರಾಧಾ-ಕೃಷ್ಣ, ಭೂತಕೋಲ ಮುಂತಾದ ಚಿತ್ರಗಳ ಗಾಳಿಪಟಗಳು ಉತ್ಸವಕ್ಕೆ ಕಳೆ ನೀಡಿದವು.

ಹವ್ಯಾಸಿ ತಂಡ: ಗಾಳಿಪಟ ಸ್ಪರ್ಧೆಗೆಂದೇ ಬಂದವರಂತೆ ಹವ್ಯಾಸಿ ಗಾಳಿಪಟ ಹಾರಿಸುವ ತಂಡಗಳು ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಅಂತಾರಾಷ್ಟ್ರೀಯ ಮಟ್ಟದ ಅನೇಕ ಉತ್ಸವಗಳಲ್ಲಿ ಪಾಲ್ಗೊಂಡಿದ್ದ ತಂಡಗಳ ಗಾಳಿಪಟಗಳು ವಿಶೇಷವಾಗಿತ್ತು. 300 ಅಡಿ ಉದ್ದದ ಡ್ರಾÂಗನ್‌ ಪಟ, 100 ಅಡಿ ಉದ್ದದ ರಾಣಿ ಪಟ, 30 ಅಡಿ ಹರಡುವ ರಿಂಗ್‌ ಪಟ, 2 ಸೂತ್ರದಿಂದ ಹಾರಿಸುವ ಸ್ಟಂಟ್‌ ಪಟ, ಫಿಶ್‌ ಪಟ, ನಕ್ಷತ್ರ, ಬಟರ್‌ಫ್ಲೆç, 2ಡಿ, ಸರಮಾಲೆ ಆಕೃತಿ ಗಾಳಿಪಟಗಳು ನೋಡುಗರಿಗೆ ರಸದೌತಣ ನೀಡಿದವು.

ಮಾರಾಟ ಮಳಿಗೆ, ಪ್ರಾತ್ಯಕ್ಷಿಕೆ: ಗಾಳಿಪಟ ಉತ್ಸವದಲ್ಲಿ ಗಾಳಿಪಟ ಮಾರಾಟ ಮಳಿಗೆಗಳು ಗಾಳಿಪಟ ಖರೀದಿಸಿ, ಹಾರಿಸುವಂತೆ ಪ್ರೇರೇಪಿಸಿದವು. ಜತೆಗೆ ಗಾಳಿಪಟ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿಶೇಷವಾಗಿ ಮಕ್ಕಳಿಗೆ ಗಾಳಿಪಟ ಕಟ್ಟುವಿಕೆ ಕಲೆಯ ಬಗೆಗೆ ತಿಳಿಸಿಕೊಡಲಾಯಿತು. ಒಟ್ಟಿನಲ್ಲಿ ಗಾಳಿಪಟ ಉತ್ಸವ ಕೇವಲ ಸ್ಪರ್ಧೆಯಾಗದೇ ಗಾಳಿಪಟ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡುವುದಕ್ಕೆ ಮಾದರಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next