Advertisement

ಕಾಲೇಜು ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿ ಅಸಾಧ್ಯ?

01:23 AM Feb 06, 2019 | |

ಬೆಂಗಳೂರು: ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿ ಮಾಹಿತಿಯನ್ನು ಕಾಲೇಜಿನ ಪ್ರಾಂಶುಪಾಲರು ನಿರ್ದಿಷ್ಟ ಸಮಯದಲ್ಲಿ ನೀಡದೇ ಇರುವುದರಿಂದ ಮರುಪಾವತಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

Advertisement

2018-19ನೇ ಸಾಲಿನ ಶೈಕ್ಷಣಿಕ ವರ್ಷದ ಕೊನೆಯ ಘಟ್ಟದಲ್ಲಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿಯ 1, 3, 5 ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದಿದೆ. 2, 4 ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜುಗೊಳ್ಳುತ್ತಿದ್ದಾರೆ. ಆದರೆ, ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷದ ಆರಂಭದಲ್ಲಿ ಪಾವತಿಸಿರುವ ಶುಲ್ಕ ಇನ್ನೂ ಮರುಪಾವತಿಯಾಗಿಲ್ಲ.

ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ 1,85,365 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 1,47,680 ವಿದ್ಯಾರ್ಥಿನಿಯರ ಮಾಹಿತಿ ಈಗಾಗಲೇ ಇಲಾಖೆಗೆ ತಲುಪಿದೆ. ಆದರೆ, 37,685 ವಿದ್ಯಾರ್ಥಿನಿಯರ ಮಾಹಿತಿ ಇನ್ನೂ ಇಲಾಖೆಗೆ ಬಂದಿಲ್ಲ. ಎಲ್ಲ ವಿದ್ಯಾರ್ಥಿನಿಯರ ಮಾಹಿತಿಯನ್ನು ಜ.31ರೊಳಗೆ ನೀಡುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಬಹುತೇಕ ಜಿಲ್ಲೆಗಳ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಪೂರ್ತಿ ಪ್ರಮಾಣದ ಮಾಹಿತಿ ಒದಗಿಸದೇ ಇರುವುದು ತಿಳಿದು ಬಂದಿದೆ.

ಬೆಂಗಳೂರು ಜಿಲ್ಲೆಯ ಸುಮಾರು 2 ಸಾವಿರ, ಮೈಸೂರು ಜಿಲ್ಲೆಯ 1,500, ಹಾಸನ ಜಿಲ್ಲೆಯ ಒಂದು ಸಾವಿರ, ಚಿತ್ರದುರ್ಗದ 1,200, ದಾವಣಗೆರೆಯ 700, ದಕ್ಷಿಣ ಕನ್ನಡದ 1,200, ಉಡುಪಿಯ 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮಾಹಿತಿ ಸೇರಿ ಎಲ್ಲ ಜಿಲ್ಲೆಗಳಿಂದ ಒಟ್ಟು 37,685 ವಿದ್ಯಾರ್ಥಿನಿಯರ ಮಾಹಿತಿ ಬಂದಿಲ್ಲ.

ಶುಲ್ಕ ಮರುಪಾವತಿ ವಿಳಂಬ?: ಶುಲ್ಕ ಮರುಪಾತಿಗೆ ಅರ್ಹರಿರುವ ವಿದ್ಯಾರ್ಥಿನಿಯರ ಮಾಹಿತಿಯನ್ನು ಕಾಲೇಜಿನ ಪ್ರಾಂಶುಪಾಲರು ನಿರ್ದಿಷ್ಟ ಸಮಯದಲ್ಲಿ ಆನ್‌ಲೈನ್‌ ಮೂಲಕ ಇಲಾಖೆಗೆ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿಯ ಹಣ ಸಿಗುವುದು ಇನ್ನಷ್ಟು ವಿಳಂಬವಾಗಲಿದೆ. ಇಲಾಖೆಯಿಂದ ಹೆಚ್ಚುವರಿಯಾಗಿ ನೀಡಿರುವ ಕಾಲಾವಕಾಶದೊಳಗೆ ಮಾಹಿತಿ ನೀಡದೇ ಇದ್ದರೆ ವಿದ್ಯಾರ್ಥಿನಿಯರು ಸೌಲಭ್ಯದಿಂದಲೇ ವಂಚಿತರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

Advertisement

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಲ್ಲ ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿಯ ಯೋಜನೆ ಜಾರಿಗೆ ತಂದಿತ್ತು. ಅದರಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನ ಇರುವುದರಿಂದ ಶುಲ್ಕ ಮರುಪಾವತಿಯ ಸೌಲಭ್ಯ ಅನ್ವಯಿಸುವುದಿಲ್ಲ. (ಕಾರಣ, ಒರ್ವ ವಿದ್ಯಾರ್ಥಿಗೆ ಸರ್ಕಾರದ ಎರಡು ಸೌಲಭ್ಯ ಒಮ್ಮೆಗೆ ನೀಡಲು ಸಾಧ್ಯವಿಲ್ಲ.) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರು ಹೊರತುಪಡಿಸಿ, ಇತರೆ ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರ ಶುಲ್ಕ ಮರುಪಾವತಿ ಆಗಲಿದೆ.

ಕಾಲೇಜು ದಾಖಲಾತಿ ಸಂದರ್ಭದಲ್ಲಿ ಪಾವತಿಸಿರುವ ಸರ್ಕಾರಿ ಶುಲ್ಕ 410 ರೂ., ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ಇತ್ಯಾದಿ 3 ಸಾವಿರ ಹಾಗೂ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಇತ್ಯಾದಿ ಶುಲ್ಕ 150ರೂ.ನಿಂದ 180 ರೂ. ಸೇರಿದಂತೆ ಸುಮಾರು 3500ರೂ.ಗಳಿಗೂ ಅಧಿಕ ಹಣ ಪಾವತಿ ಮಾಡಿರುತ್ತಾರೆ.

ಸರ್ಕಾರದ ಶುಲ್ಕ ಮರುಪಾವತಿ ಮಾನದಂಡದಂತೆ ನಿಗದಿತ ಪ್ರಮಾಣದ ಶುಲ್ಕ ಮರುಪಾವತಿಯಾಗಲಿದೆ. ಕಾಲೇಜಿನ ಪ್ರಾಂಶುಪಾಲರ ಮೂಲಕವೇ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಶುಲ್ಕು ಮರುಪಾವತಿ ಹಣ ಜಮಾ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

15ರೊಳಗೆ ಶುಲ್ಕ ಮರುಪಾವತಿ

ರಾಜ್ಯದ ಎಲ್ಲ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮಾಹಿತಿ ಸಂಗ್ರಹಣೆ ಕಾರ್ಯ ವೇಗವಾಗಿ ನಡೆಯುತ್ತಿದೆ. ವಿದ್ಯಾರ್ಥಿನಿಯರು ಪಾವತಿಸಿರುವ ಶುಲ್ಕ ಮತ್ತು ಶುಲ್ಕ ಮರುಪಾವತಿಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಫೆ.15ರೊಳಗೆ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಆಗಲಿದೆ. ಈ ಸಂಬಂಧ ಎಲ್ಲ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದ್ದೇವೆ. ಸರ್ಕಾರದಿಂದ ಅಗತ್ಯ ಹಣ ಕೂಡ ಮಂಜೂರಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ.ಎಸ್‌.ಮಲ್ಲೇಶ್ವರಪ್ಪ ಮಾಹಿತಿ ನೀಡಿದರು.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next