Advertisement
“ಇವ್ರು ಕಾಲೇಜಿಗೆ ಓದಲಿಕ್ಕೆ ಬರ್ತಾರೋ, ಶೋಕಿ ಮಾಡಲಿಕ್ಕೆ ಬರ್ತಾರೋ ಗೊತ್ತಾಗಲ್ಲ. ಶಿಸ್ತಂತೂ ಮೊದಲೇ ಇಲ್ಲ. ಕೈಕಾಲು ಕಟ್ಟಿಕೊಂಡು ಬಂದುಬಲವಂತವಾಗಿ ಕ್ಲಾಸ್‌ನಲ್ಲಿ ಹಾಕಿದಂಗೆ ಆಡ್ತಾರೆ. ಇವ್ರ ದೇಹ ಮಾತ್ರ ಕ್ಲಾಸ್‌ನಲ್ಲಿ, ಆದರೆ ಮನಸ್ಸು ಮತ್ತೆಲ್ಲೋ.!? ಇಂತಹವರಿಗೆ ಪಾಠ ಮಾಡೋದು, ನೀರು ಇಳಿಯದ ಗಂಟಲಲ್ಲಿ ಕಡುಬು ತುರುಕಿದಂಗೆ..ಕಷ್ಟ ಕಷ್ಟ. ಯಾವಾಗ ಇವ್ರು ನೆಟ್ಟಗೆ ಆಗ್ತಾರೋ..”ಉಪನ್ಯಾಸಕರೊಬ್ಬರು ಹೀಗೆ ತಮ್ಮಅಳಲು ತೋಡಿಕೊಳ್ಳುತ್ತಿದ್ದರೆ, ಅತ್ತ ಹುಡುಗರಲ್ಲಿಬಹುತೇಕರು ಬೆನ್ನಹಿಂದೆ ಬುಕ್ ಸಿಕ್ಕಿಸಿಕೊಂಡು ಸ್ಟೈಲಾಗಿ ಕಾಲೇಜಿಗೆ ಎಂಟ್ರಿ ಕೊಟ್ಟಾಗ, ಕಾಲೇಜಿನಹೆಬ್ಟಾಗಿಲಿನ ಮೇಲಿದ್ದ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ..’ ಬರಹ ಬಿಕ್ಕಿಳಿಸುತ್ತಿದ್ದಂತೆ ಭಾಸವಾಯಿತು.
Related Articles
Advertisement
ಕೋವಿಡ್ ಕಾರಣಕ್ಕೆ ಮನೆಯಲ್ಲಿ, ಆನ್‌ಲೈನ್ ಕ್ಲಾಸ್‌ಗಳಲ್ಲಿ ಬಂಧಿಯಾಗಿದ್ದ ಅನೇಕರು ಕೋವಿಡ್ ತಗ್ಗಿದ ನಂತರ ನೇರವಾಗಿ ಕಾಲೇಜಿಗೆ ಕಾಲಿಟ್ಟಿದ್ದಾರೆ. ಸಿಕ್ಕಿರುವ ಅಲ್ಪ ಸಮಯದಲ್ಲೇ ಪರೀಕ್ಷೆಗೆ ತಯಾರಿ ಆಗುತ್ತಿದ್ದಾರೆ. ಈ ಕಾರಣಕ್ಕೆ ಬರೀ ಪಾಠ ಓದು, ಪಾಠ ಓದು.. ಇದು ತುಂಬಾ ಯಾಂತ್ರಿಕವಾಗಿ, ಬೋರ್ ಅನಿಸುತ್ತಿದೆ ಎನ್ನುವವರೂ ಇದ್ದಾರೆ. ಇವರಿಗೆಲ್ಲ ಅಭ್ಯಾಸದ ಜೊತೆಗೆ ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳನ್ನು ಮಿಸ್ ಮಾಡಿಕೊಂಡೆವು ಎಂಬ ಫೀಲ್ ಇದೆ.
ಅಭ್ಯಾಸವೆಂದರೆ ಅಜೀರ್ಣ..! :
ಇಷ್ಟು ದಿನ ಓದು-ಬರಹ ಮರೆತು ಮರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಬರೀ ಆಟ, ತುಂಟಾಟ, ಚೇಷ್ಟೆ, ತರಲೆ, ಮೋಜು-ಮಸ್ತಿ, ಶೋಕಿ.. ಇಷ್ಟೇ ಅವರ ಪ್ರಪಂಚ ಆಗಿತ್ತು. ಲಾಂಗ್ ಗ್ಯಾಪ್ ನಂತರ ಈಗ ಶಿಸ್ತಿನ ಚೌಕಟ್ಟಿಗೆ ಒಳಪಡುವುದು ಕಿರಿಕಿರಿ ಆಗಿದೆ. ಮೊಬೈಲ್,ನೆಟ್‌ವರ್ಕ್ ಸಮಸ್ಯೆಯಿಂದ ಕಡೆಗೂ ಮುಕ್ತಿ ಸಿಕ್ತು. ಇನ್ಮೇಲೆ ಮುಖಾಮುಖೀಯಾಗಿ ಪಾಠ ಕೇಳಬಹುದು ಎಂದು ಯೋಚಿಸುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಬಹುತೇಕರು ಜಾಲಿ ಮೂಡಿನಿಂದ ಓದುವ ಮೂಡಿಗೆ ಇನ್ನೂ ಬಂದಿಲ್ಲ. ಓದು ಒಕ್ಕಾಲು ತಲೆಹರಟೆ ಮುಕ್ಕಾಲು ಅನ್ನುವಂತಿದೆ ಹೆಚ್ಚಿನವರನಡೆ-ನುಡಿ. ಮನಸ್ಸು ಕೊಟ್ಟು ಪಾಠ ಕೇಳುವ,ಓದು-ಬರಹದಲ್ಲಿ ಮಗ್ನರಾಗುವ ಮಾತೇ ಇಲ್ಲ. ಹೊಸ ವಿಷಯ ಒತ್ತಟ್ಟಿಗೆ ಇರಲಿ; ಇಷ್ಟು ವರ್ಷ ಕಲಿತಿದ್ದನ್ನೂ ಮರೆತಿದ್ದಾರೆ. ಕೋವಿಡ್ ಕಾರಣದಿಂದ ಕಲಿಕಾ ಅವಧಿ ಕಡಿತವಾಗಿದೆ. ಹೇಗಿದ್ದರೂ ಪಾಸ್ ಮಾಡಿ ಮುಂದಿನ ತರಗತಿಗೆ ತಳ್ಳುತ್ತಾರೆ. ಹಾಗಾಗಿ ಈ ವರ್ಷ ಹೇಗೆ ಓದಿದರೂ ನಡೆಯುತ್ತೆ ಎನ್ನುವ ಮನಸ್ಥಿತಿ ಹಲವು ವಿದ್ಯಾರ್ಥಿಗಳಲ್ಲಿ ಬೇರೂರಿದೆ. ಮುಂದಿನ ದಿನಗಳಲ್ಲಿಯಾದರೂ ಓದಿಗೆ ಇರುವ ಮಹತ್ವ ಅರಿತುಕೊಂಡು ಅವರು ಬದಲಾಗುತ್ತಾರಾ?- ಇದು, ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಕೇಳುತ್ತಿರುವ ಪ್ರಶ್ನೆ. ಉತ್ತರ ಹೇಳಬೇಕಾದ ವಿದ್ಯಾರ್ಥಿಗಳ ಚಿತ್ತ ಬೇರೆಲ್ಲೋ ಇದೆ…
ಶಿಕ್ಷಕರಿಗೆ ಶಿಕ್ಷೆ..! :
ಕೋವಿಡ್ ಟೈಂನಲ್ಲಿ ವಿದ್ಯಾರ್ಥಿಗಳು ಓದು-ಬರಹಕ್ಕೆ ಗೋಲಿ ಹೊಡೆದಿದ್ದರ ಅಸಲಿ ಶಿಕ್ಷೆಶಿಕ್ಷಕರಿಗೆ!. ಬಹುತೇಕರು ವರ್ಣಮಾಲೆಗಳನ್ನೇ ಮರೆತಿದ್ದಾರೆ!. ಹೀಗೆ ಓದಿ ಮರೆತಿದ್ದನ್ನು ಪುನಃ ಜ್ಞಾಪಕಕ್ಕೆ ತರುವಲ್ಲಿ ಶಿಕ್ಷಕರು ಶ್ರಮಿಸಬೇಕಾಗಿದೆ. ಪರೀಕ್ಷಾ ದೃಷ್ಟಿಯಿಂದ ಮಾತ್ರ ಈ ವರ್ಷ ಬೋಧನೆಗೆ ಹೆಚ್ಚಿನ ಪ್ರಾಶಸ್ತ್ಯ. ಇದಕ್ಕಾಗಿ ಕೆಲವೊಂದು ಪಠ್ಯಗಳನ್ನುಕೈಬಿಡಲಾಗಿದೆ. ಹಾಗಂತ ಮಕ್ಕಳಿಗೆ ಅರೆಬರೆಯಾಗಿ ಕಲಿಸುವಂತೆಯೂ ಇಲ್ಲ.ಸಾಧ್ಯವಾದಷ್ಟೂ ವಿಷಯವನ್ನು ಅವರಿಗೆ ಹೇಳಿಕೊಡಲೇಬೇಕಾಗಿದೆ. ಇದರ ಜೊತೆಗೆ ಮಕ್ಕಳನ್ನು ನಿಯಂತ್ರಿಸುವ, ಸಿಲಬಸ್‌ನ್ನು ಪೂರ್ಣಗೊಳಿಸುವ ಒತ್ತಡ ಇದೆ. ನಾನಾ ಕಾರಣಗಳಿಂದ ಪೋಷಕರು ಕೆಲವು ಜವಾಬ್ದಾರಿಯಿಂದ ನುಣಿಚಿಕೊಂಡರೂ ಅಂತಿಮವಾಗಿ ಮಕ್ಕಳನ್ನು ಮತ್ತೆ ಓದಿನ ಹಳಿಗೆ ತರುವ ಹೊಣೆ ಶಿಕ್ಷಕರ ಪಾಲಿಗೆ ಬರುತ್ತದೆ. ಈ ಹೊಣೆಗಾರಿಕೆಯನ್ನು ಅವರು ನಿಭಾಯಿಸಲೇಬೇಕು.
–ಸ್ವರೂಪಾನಂದ ಕೊಟ್ಟೂರು