Advertisement

14ರೊಳಗೆ ಬರ ನಿರ್ವಹಣೆ ಮಾಹಿತಿ ಸಂಗ್ರಹಿಸಿ

11:26 PM May 11, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಬರ ನಿರ್ವಹಣೆ ಕುರಿತು ಮೇ 14ರೊಳಗೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಯದರ್ಶಿಗಳು ವಾಸ್ತವಾಂಶದ ಮಾಹಿತಿಯೊಂದಿಗೆ ವರದಿ ಸಿದ್ಧಪಡಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

Advertisement

ಮೇ 15ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಿದ್ದು, ಅಷ್ಟರಲ್ಲಿ ಜಿಲ್ಲಾವಾರು ಬರ ನಿರ್ವಹಣೆ ಕುರಿತಾದ ಮಾಹಿತಿ ಸಿದ್ಧಪಡಿಸಿಕೊಳ್ಳಲು ನಿರ್ದೇಶಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಯದರ್ಶಿಗಳು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತಹಸೀಲ್ದಾರರ ಸಭೆ ನಡೆಸಿ, ಬರ ಪರಿಹಾರ ಕಾಮಗಾರಿ ಹಾಗೂ ಕುಡಿಯುವ ನೀರು ಪೂರೈಕೆ, ಉದ್ಯೋಗ ಸೃಷ್ಟಿ, ಮೇವು ವ್ಯವಸ್ಥೆ ಕುರಿತು ಮಾಹಿತಿ ಪಡೆಯಬೇಕು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಹಣ, ಇದುವರೆಗೂ ವೆಚ್ಚವಾಗಿರುವ ಹಣ, ಬರ ನಿರ್ವಹಣೆ ಕುರಿತು ರೂಪಿಸಿದ್ದ ಕ್ರಿಯಾ ಯೋಜನೆ ಹಾಗೂ ಅನುಷ್ಠಾನದ ಪ್ರಮಾಣ, ಮೇವಿನ ಅಗತ್ಯತೆ ಹಾಗೂ ಪೂರೈಕೆ, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿರುವ ಬಗೆಗಿನ ಸಮಗ್ರ ವಿವರ, ಖಾಸಗಿ ಬೋರ್‌ವೆಲ್‌ ಬಾಡಿಗೆಗೆ ಪಡೆದಿರುವ ವಿವರ, ಅಲ್ಲಿ ಲಭ್ಯವಾಗುತ್ತಿರುವ ನೀರು, ಪೂರೈಕೆ ಮಾಡಲಾಗುತ್ತಿರುವ ಗ್ರಾಮಗಳು ಎಲ್ಲದರ ಬಗ್ಗೆಯೂ ಮಾಹಿತಿ ಸಂಗ್ರಹಿಸುವಂತೆ ತಿಳಿಸಲಾಗಿದೆ.

ವಿಡಿಯೋ ಸಂವಾದದ ವೇಳೆ ಎಲ್ಲಾ ಜಿಲ್ಲೆಗಳ ಸಮಗ್ರ ಮಾಹಿತಿಯೊಂದಿಗೆ ವಿವರಣೆ ನೀಡಬೇಕೆಂದು ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿಯವರ ಮೂಲಕ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಕುಡಿಯುವ ನೀರಿಗೆ ತೊಂದರೆ ಇರುವ ಗ್ರಾಮಗಳಲ್ಲಿ ಯಾವುದೇ ವಿಳಂಬ ಮಾಡದೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಆಯಾ ತಾಲೂಕಿನ ತಹಸೀಲ್ದಾರರುಗಳಿಗೆ ಸಂಪೂರ್ಣ ಅಧಿಕಾರ ನೀಡಿರುವುದರಿಂದ ಎಲ್ಲಿಯೂ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಸಚಿವರ ತಂಡ ರಚನೆ: ವಿಡಿಯೋ ಸಂವಾದದ ನಂತರ ಸಮರ್ಪಕ ಬರ ನಿರ್ವಹಣೆಗೆ ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಸಹಕಾರ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಸಚಿವರ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹಿಂಗಾರು ನಷ್ಟದ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ 11,384 ಕೋಟಿ ರೂ.ನಷ್ಟದ ಅಂದಾಜು ಮಾಡಿ ಫೆಬ್ರವರಿಯಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ನಿಯಮಾವಳಿಗಳ ಪ್ರಕಾರವೇ 2,064 ಕೋಟಿ ರೂ.ಬಿಡುಗಡೆಯಾಗಬೇಕಿದೆ. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ.

ಒಂದೊಮ್ಮೆ ಬರ ನಿರ್ವಹಣೆಗೆ ಹಣದ ಮುಗ್ಗಟ್ಟು ಉಂಟಾದರೆ ರಾಜ್ಯ ಸರ್ಕಾರದಿಂದಲೇ ಮತ್ತಷ್ಟು ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಕುಡಿಯುವ ನೀರಿಗೆ 201 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. 3,600 ಕೋಟಿ ರೂ.ವೆಚ್ಚದಲ್ಲಿ ಬರ ನಿರ್ವಹಣೆಗೆ ಕ್ರಿಯಾ ಯೋಜನೆ ಸಹ ರೂಪಿಸಲಾಗಿದೆ.

ಕುಡಿಯುವ ನೀರಿಗೆ ಸಮಸ್ಯೆಯಿದೆಯೇ?
ಸಹಾಯವಾಣಿಗೆ ಕರೆ ಮಾಡಿ: ರಾಜ್ಯದಲ್ಲಿನ ಬರ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತಂತೆ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸಲು “ಸಹಾಯವಾಣಿ’ ಕಾಲ್‌ಸೆಂಟರ್‌ಗಳನ್ನು ತೆರೆಯಲಾಗಿದೆ. ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕಾಲ್‌ಸೆಂಟರ್‌ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಕರೆ ಮಾಡಿ ತಮ್ಮ ದೂರು ದಾಖಲಿಸಬಹುದಾಗಿದೆ.

ಕುಡಿಯುವ ನೀರು ಪೂರೈಕೆ ಸಂಬಂಧ ಸಾರ್ವಜನಿಕರಿಂದ ಬರುವ ದೂರುಗಳ ಬಗ್ಗೆ ತಕ್ಷಣವೇ ಸ್ಥಳೀಯ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಕಾಲ್‌ಸೆಂಟರ್‌ಗಳ ದೂರವಾಣಿ ಸಂಖ್ಯೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವೆಬ್‌ಸೈಟ್‌ rdpr.kar.nic.in ಪ್ರಕಟಿಸಲಾಗಿದೆ.

ಸಚಿವರ ಜತೆ ಸಿಎಂ ಚರ್ಚೆ: ವಿಶ್ರಾಂತಿಯಲ್ಲಿರುವ ಕುಮಾರಸ್ವಾಮಿಯವರು ಶನಿವಾರ ದೂರವಾಣಿ ಮೂಲಕ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಕೃಷಿ ಸಚಿವ ಶಿವಶಂಕರ ರೆಡ್ಡಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡ ಜತೆ ಮಾತನಾಡಿ ಬರ ಪರಿಹಾರ, ನಿರ್ವಹಣೆ ಕುರಿತು ಮಾಹಿತಿ ಪಡೆದಿದ್ದಾರೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಹಾಯವಾಣಿ ದೂರವಾಣಿ ಸಂಖ್ಯೆ
*ಬಾಗಲಕೋಟೆ- 08354-220446
*ಬೆಂಗಳೂರು- 080- 26713944
*ಬೆಂಗಳೂರು ಗ್ರಾಮಾಂತರ- 080-29781021
*ಬೆಳಗಾವಿ-0831-2420835
*ಬಳ್ಳಾರಿ-9535853159
*ಬೀದರ್‌-9743452632
*ವಿಜಯಪುರ- 08352-276378
*ಚಾಮರಾಜನಗರ-08226-226054
*ಚಿಕ್ಕಮಗಳೂರು-18004251104
*ಚಿತ್ರದುರ್ಗ-08194-234743
*ದಕ್ಷಿಣ ಕನ್ನಡ-0824-220583
*ದಾವಣಗೆರೆ -08192-262126
*ಧಾರವಾಡ-0836-2441209
*ಗದಗ-08372-234364
*ಕಲಬುರಗಿ-08472-278677
*ಹಾಸನ-18004-251020
*ಹಾವೇರಿ-18375-237129
*ಕೊಡಗು-08272-22107
*ಕೋಲಾರ-08152-241367
*ಕೊಪ್ಪಳ-08539-221207
*ಮಂಡ್ಯ-08232-221443
*ಮೈಸೂರು-0821-2460495
*ರಾಯಚೂರು-08532-228591
*ಶಿವಮೊಗ್ಗ- 08182-262226
*ತುಮಕೂರು-0816-2260202
*ಉಡುಪಿ-0802-2574879
*ಉತ್ತರ ಕನ್ನಡ-08382-226292
*ಚಿಕ್ಕಬಳ್ಳಾಪುರ-08156-270058
*ರಾಮನಗರ-080-27271223
*ಯಾದಗಿರಿ-08473-253758

Advertisement

Udayavani is now on Telegram. Click here to join our channel and stay updated with the latest news.

Next