Advertisement

ಕೋಲಿ ಎಸ್‌ಟಿ ಸೇರ್ಪಡೆ ಸನ್ನಿಹಿತ: ಚಿಂಚನಸೂರ

01:05 PM Jan 29, 2022 | Team Udayavani |

ಚಿಂಚೋಳಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿಯೇ ಕಾಂಗ್ರೆಸ್‌ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ತಾಲೂಕಿನ ನರನಾಳ ಗ್ರಾಮದಲ್ಲಿ ಶುಕ್ರವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ 902ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಕಾರ್ಮಿಕ ಇಲಾಖೆ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿ ಸಚಿವರಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂದು ಕಲಬುರಗಿ ನಗರದಲ್ಲಿ ಉರುಳು ಸೇವೆ ಮಾಡಿದ್ದೇನೆ. ಯಾನಾಗುಂದಿ, ಗಂಗಾವತಿಯಲ್ಲಿ ಕಬ್ಬಲಿಗ ಸಮಾಜದ ಐತಿಹಾಸಿಕ ಸಮಾವೇಶ ಏರ್ಪಡಿಸಿ ರಾಜ್ಯ ನಾಯಕರ ಗಮನ ಸೆಳೆದಿದ್ದೇನೆ. ಆದರೆ ಇನ್ನುವರೆಗೆ ನ್ಯಾಯ ಸಿಕ್ಕಿಲ್ಲ. ಅಲ್ಲದೇ ಬಿಜೆಪಿ ಸರ್ಕಾರದಲ್ಲಿ ಒಬ್ಬರೂ ಕಬ್ಬಲಿಗ ಸಮಾಜದ ಶಾಸಕರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಕೋಲಿ ಕಬ್ಬಲಿಗ ಸಮಾಜ ಶೀಘ್ರವೇ ಎಸ್‌ಟಿಗೆ ಸೇರಲಿದೆ. ಎಂಎಲ್‌ಸಿ ಎನ್‌. ರವಿಕುಮಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌ ನೀಡಿದ ಭರವಸೆ ಈಡೇರಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಮಾತನಾಡಿ, ಕೋಲಿ ಸಮಾಜ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಶ್ರಮಜೀವಿ ಸಮಾಜ ಆಗಿರುವುದರಿಂದ ಎಲ್ಲ ಪಕ್ಷಗಳು ಒಳ್ಳಯದನ್ನೇ ಬಯಸಿವೆ. ಕೋಲಿ ಸಮಾಜದಲ್ಲಿ ಏಕತೆ ಅಗತ್ಯವಾಗಿದೆ ಎಂದರು.

ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾ ಪುರ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಗಿರಿರಾಜ ನಾಟೀಕಾರ, ರವಿರಾಜ ಕೊರವಿ ಮಾತನಾಡಿದರು. ನರನಾಳ ಮಠದ ಪೂಜ್ಯ ಶಿವಕುಮಾರ ಶಿವಾಚಾರ್ಯರು, ಗೌರಿಗುಡ್ಡದ ಪೂಜ್ಯ ಸಿದ್ಧಶಿವಯೋಗಿ ಶರಣರು ಸಾನ್ನಿಧ್ಯ ವಹಿಸಿದ್ದರು. ಕೋಲಿ ಸಮಾಜದ ಮುಖಂಡ ಲಕ್ಷ್ಮಣ ಆವಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಕಾರಾಮ ಚಿತ್ತಾಪುರ ಉಪನ್ಯಾಸ ನೀಡಿದರು.

ಕಬ್ಬಲಿಗ ಸಮಾಜದ ಅನಿಲಕುಮಾರ ಜಮಾದಾರ, ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಶ್ರೀನಿವಾಸ ಘಾಲಿ, ಗುಂಡಪ್ಪ ಅವರಾದಿ ಇನ್ನಿತರರಿದ್ದರು. ಶರಣಪ್ಪ ಸುಂಠಾಣ ಸ್ವಾಗತಿಸಿದರು, ಸುನೀಲ ನಾಟೀಕಾರ ವಂದಿಸಿದರು.

ಬಿಜೆಪಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ರಾಜಕೀಯ ಕುರಿತು ಭಾಷಣ ಮಾಡುವಾಗ ಕಾಂಗ್ರೆಸ್‌ ಪಕ್ಷದ ಅನಿಲಕುಮಾರ ಜಮಾದಾರ, ರವಿರಾಜ ಕೊರವಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗೊಂದಲಮಯ ವಾತಾವರಣ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next