ಚನ್ನರಾಯಪಟ್ಟಣ: ಮುಂಜಾನೆ ವಾಯುವಿಹಾರಕ್ಕೆ ತೆರಳಲಾಗದಷ್ಟು ಕೊರೆಯುವ ಚಳಿ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪದಿಂ ದಾಗಿ ತಾಲೂಕಿನ ಜನತೆ ರೋಸಿ ಹೋಗಿದ್ದು ಜನತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಈ ರೀತಿ ಹವಾ ಮಾನ ವೈಪರೀತ್ಯ ತಾಲೂಕಿ ನಲ್ಲಿ ಮೊದಲ ಕಾಣಿಸಿಕೊಂಡಿದೆ. ಮಹಾ ಶಿವರಾತ್ರಿ ಬಳಿಕ ಬೇಸಿಗೆ ಕಾಲವೆಂದು ರೂಢಿಯಲ್ಲಿರುವ ನಂಬಿಕೆ. ಆದರೆ, ಬೇಸಿಗೆ ಆರಂಭಕ್ಕೆ ಮೊದಲೇ ರಣ ಬಿಸಿಲು ಸುಡುತ್ತಿದೆ. ಬೆಳಗ್ಗೆ 10 ಗಂಟೆಗೆÇÉಾ ಮಧ್ಯಾಹ್ನ ಹನ್ನೆರಡು ಗಂಟೆಯೇನೋ ಎನ್ನುವಷ್ಟು ಬಿಸಿಲು ಜನರನ್ನು ಹೈರಾಣಾಗಿಸಿದೆ. ತಾಯಂದಿರ ತಲೆ ನೋವು: ಕೊರೊನಾ ತಣ್ಣಗಾಗಿದ್ದು 7ನೇ ತರಗತಿ ಮೇಲ್ಪಟ್ಟ ಶಾಲೆಗಳು ಪ್ರಾರಂಭವಾಗಿವೆ. ಮುಂಜಾನೆ ಮಕ್ಕಳನ್ನು ಸಿದ್ಧ ಮಾಡಿ ಶಾಲೆಗೆ ಕಳುಹಿಸುವಾಗ ಬೆಚ್ಚನೆಯಉಡುಪು ಹಾಕುತ್ತಾರೆ. ಶಾಲೆ ತಲುಪುವುದರೊಳಗೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು ಮುಖ ಹಾಗೂ ದೇಹದ ಮೇಲೆ ಸಖೆ ಗುಳ್ಳೆಗಳು ಬರುತ್ತಿವೆ. ಇನ್ನು ಬೆಚ್ಚನೆಯ ಉಡುಪು ಹಾಕದಿದ್ದರೆ ಮಕ್ಕಳಿಗೆ ಶೀತ ಅಂಟಿಕೊಳ್ಳುತ್ತಿದೆ. ಇದರಿಂದ ತಾಯಂದಿರಿಗೆ ಪ್ರಸ್ತುತ ಹವಾಮಾನ ತಲೆನೋವಾಗಿ ಪರಿಣಮಿಸಿದೆ.
ಸಂಜೆ ಗಡಗಡ ಚಳಿ: ಸೂರ್ಯ ಪಶ್ಚಿಮಕ್ಕೆ ಸರಿಯುತ್ತಿದ್ದಂತೆ ಮೈ ಕೊರೆಯುವ ಚಳಿ ಆವರಿಸುತ್ತದೆ. ಇನ್ನು ಮುಂಜಾನೆ ಹಾಗೂ ರಾತ್ರಿ ವಾಯುವಿಹಾರಿಗಳನ್ನು ಸಂಕಷ್ಟಕ್ಕೀಡು ಮಾಡಿದೆ. ಮುಂಜಾನೆ 10 ಡಿಗ್ರಿ 10 ಗಂಟೆಗೆ 30 ಡಿಗ್ರಿ: ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಹಾಗೂ ಕಡಿಮೆ ತಾಪಮಾನ, ಬೇಸಿಗೆ ಆರಂಭಕ್ಕೆ ಮುನ್ನವೇ ಜನತೆಯನ್ನು ಕಾಡುತ್ತಿದೆ. ಮುಂಜಾನೆ 10 ಡಿಗ್ರಿ ಇರುವ ತಾಪಮಾನ ಬೆಳಗ್ಗೆ 10 ಗಂಟೆ ಆಗುತ್ತಿದ್ದಂತೆ 25-30 ಕ್ಕೇರುತ್ತಿದೆ. ಇನ್ನು ಮಧ್ಯಾಹ್ನ 40-30 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಉಂಟಾಗುತ್ತಿದೆ. ಇದರಿಂದಾಗಿ ರೈತರು ಕೃಷಿ ಭೂಮಿಗೆ ತೆರಳಲೂ ಅಸಾಧ್ಯವಾಗುತ್ತಿದೆ. ಕಲ್ಲಂಗಡಿ ಮತ್ತು ತಂಪು ಪಾನೀಯಕ್ಕೆ
ಹೆಚ್ಚಿದ ಬೇಡಿಕೆ: ಬಿರು ಬೇಸಿಗೆ ವಾತಾವರಣದಿಂದ ತಾಲೂಕಿನಲ್ಲಿ ಎಳನೀರು, ಕಲ್ಲಂಗಡಿ ಸೇರಿದಂತೆ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ಬೇಸಿಗೆ ಪ್ರಾರಂಭಕ್ಕೂ ಮುನ್ನ ರಸ್ತೆ ಬದಿ ಕಲ್ಲಂಗಡಿ ಮಾರಾಟ ಪ್ರಾರಂಭವಾಗಿದೆ. ಕೆ.ಜಿ.ಗೆ 20 ರೂ.ನಂತೆ, ಸ್ಥಳದಲ್ಲೇ ತಿನ್ನುವವರಿಗೆ ಒಂದು ಪೀಸ್‌ಗೆ 10 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಎಳನೀರು 30 ರೂ.ಗೆ ಮಾರಾಟವಾಗುತ್ತಿದೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ