ಬೆಂಗಳೂರು: ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ನಿಗೂಢ ಸಾವಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, “ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕ ಹಾಗೂ ಉದ್ಯಮಿ ಸಿದ್ಧಾರ್ಥ ಅವರ ಸಾವು ತೀವ್ರ ಆಘಾತ ಹಾಗೂ ಅಪಾರ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, “ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ, ಕಾಫಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ಧಾರ್ಥರವರ ಜೀವನ ಈ ರೀತಿ ಅಂತ್ಯವಾದದ್ದು, ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ. ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದಾರೆ.
“ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ಧಾರ್ಥ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಕಳೆದ 25 ವರ್ಷಗಳ ಸ್ನೇಹಿತ ಸಿದ್ಧಾರ್ಥ ಅವರು ಕರ್ನಾಟಕದ ಕಾಫಿ ಉದ್ಯಮವನ್ನು 2 ವಿಶ್ವಕ್ಕೆ ಪರಿಚಯಿಸಿದವರು. ಸಹಸ್ರಾರು ನೌಕರರಿಗೆ ತಮ್ಮ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಿದ್ದರು. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿ “ನೇತ್ರಾವತಿ ನದಿ ದಂಡೆಯಲ್ಲಿ ಸಿದ್ಧಾರ್ಥ ಅವರ ಪಾರ್ಥಿವ ಶರೀರ ಸಿಕ್ಕಿದೆ ಎಂಬ ಸುದ್ದಿ ಕೇಳಿದಾಗ ಆಘಾತವಾಯಿತು. ಈ ಪ್ರಕರಣ ಸಂಪೂರ್ಣ ತನಿಖೆ ನಡೆಯಬೇಕು. ಸಿದ್ಧಾರ್ಥ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಹೇಳಿದ್ದಾರೆ.
ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿ, ಸಿದ್ಧಾರ್ಥ ಅವರು ಅಣ್ಣನ ಸ್ಥಾನದಲ್ಲಿ ನಿಂತು ಸದಾ ಪ್ರೋತ್ಸಾಹಿಯಾಗಿದ್ದು, ಜನ ಸೇವೆಗೆ ಸ್ಫೂರ್ತಿ ನೀಡುತ್ತಿದ್ದರು. ಅವರ ಅಂತಿಮ ಯಾತ್ರೆಯಲ್ಲಿ ಹೆಗಲುಕೊಟ್ಟರೂ, ಅವರ ಸಾವನ್ನು ಇನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ.
ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಟ್ವೀಟ್ ಮಾಡಿ, ಸಿದ್ಧಾರ್ಥ ಅವರ ಜೀವನ ಈ ರೀತಿ ಅಂತ್ಯವಾದದ್ದು, ಆಘಾತಕರ. ಈ ಆಘಾತವನ್ನು ಎದುರಿಸುವ ಶಕ್ತಿ, ಸ್ಥೈರ್ಯ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಸಿಬ್ಬಂದಿಗೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ,’ ಎಂದಿದ್ದಾರೆ.