Advertisement
ಪರೋಕ್ಷವಾಗಿ ವಿಮರ್ಶಿಸಿದರೆ ಜೇನುನೊಣ ಉಪಯೋಗವನ್ನು ಪಡೆಯುವುದರೊಂದಿಗೆ ಹೂವಿನ ಪರಾಗಸ್ಪರ್ಶ ಕ್ರಿಯೆಯ ಮುಖ್ಯ ರೂವಾರಿಯಾಗಿ ಕೆಲಸ ಮಾಡುತ್ತಿದೆ. ಎಲ್ಲಿಯೋ ಇದ್ದ ಜೇನುನೊಣ, ಮತ್ತೆಲ್ಲೋ ಇದ್ದ ಹೂವಿನ ನಡುವೆ ಅದೆಂತಹ ಸಹಜೀವನ, ಅದೇನು ಸಹಕಾರ!
Related Articles
Advertisement
ಶೀತವಲಯ, ಮರುಭೂಮಿಯಂತಹ ಪ್ರತಿಕೂಲವಾದ ಪರಿಸರದಲ್ಲಿ ಜೀವಿಸಲಾಗದ ಹಾವಸೆಗಳು ಶಿಲೀಂಧ್ರದೊಂದಿಗೆ ಸಹಜೀವನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತಮ್ಮ ಜೀವನಚಕ್ರದಲ್ಲಿ ಮುಂದುವರೆಯುತ್ತವೆ. ಹೀಗಾಗಿ ನಾವು ಪ್ರಪಂಚದ ಬಹುಭಾಗಗಳಲ್ಲಿ ವೈವಿಧ್ಯಮಯ ಕಲ್ಲುಹೂವುಗಳನ್ನು ಕಾಣಲು ಸಾಧ್ಯ. ಕಲ್ಲುಹೂವುಗಳ
ಒಂದು ಭಾಗವಾಗಿರುವ ಹಾವಸೆ ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೆಡನ್ನು ಹೀರಿಕೊಂಡು ದ್ಯುತಿಸಂಶ್ಲೇಷಣೆಯ ಮೂಲಕ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಈ ಮೂಲಕ ಜಾಗತಿಕ ಆಮ್ಲಜನಕ ಮಟ್ಟವನ್ನು ಸಮತೋಲನದಲ್ಲಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ನಿತ್ಯಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಉಪ್ಪಳಿಗೆ ಮರ ಹಾಗೂ ಕಾಕ್ಟೇಲ್ ಎಂಬ ಇರುವೆಗಳು ಪರಸ್ಪರ ಸಹಕಾರ ಪಡೆಯುವುದರ ಮೂಲಕ ಸಹಜೀವನ ನಡೆಸುತ್ತವೆ. ಕಾಕ್ಟೇಲ್ ಇರುವೆಗಳು ಕಾಂಡದ ಟೊಳ್ಳು ಭಾಗದಲ್ಲಿ ತಮ್ಮ ಗೂಡನ್ನು ನಿರ್ಮಿಸುತ್ತವೆ. ಮರದಿಂದ ಹೊರ ಸೂಸುವ ಸಂಯುಕ್ತಗಳನ್ನು ಇವುಗಳು ಆಹಾರವನ್ನಾಗಿ ಸೇವಿಸುತ್ತವೆ.
ಸಹಜೀವನ ಪ್ರಕ್ರಿಯೆಯಲ್ಲಿ ಕಂಡುಬರುವ ಮತ್ತೂಂದು ಆಶ್ಚರ್ಯಕರ ಸಂಗತಿ ಏನೆಂದರೆ, ಇರುವೆಗಳ ಶಿಲೀಂಧ್ರ ಕೃಷಿ. ಎಲೆ ಕಡಿಯುವ ಇರುವೆ ಎಂಬ ಜ್ಞಾನಿ ಶಿಲೀಂಧ್ರ ಕೃಷಿಯ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ನಮ್ಮನ್ನು ಅಚ್ಚರಿಗೊಳಿಸಿದ ಜೀವಿ. ಉಷ್ಣವಲಯದ ಅರಣ್ಯಗಳಲ್ಲಿ ಕಂಡುಬರುವ ಈ ಇರುವೆಗಳು ಮರದ ಎಲೆಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಭೂಗತಗೂಡಿಗೆ ತಂದು ರಾಶಿ ಹಾಕುತ್ತವೆ.
ಅಲ್ಲಿ ಶಿಲೀಂಧ್ರಗಳ ಬೆಳವಣಿಗೆಗೆ ಅಗತ್ಯವಿರುವ ವಾತಾವರಣವನ್ನು ನಿರ್ಮಿಸುವುದರೊಂದಿಗೆ ಅಮೈನೋ ಆ್ಯಸಿಡ್ ಹಾಗೂ ಕಿಣ್ವಗಳನ್ನು ಸ್ರವಿಸುತ್ತವೆ. ಇದರ ಉಪಯೋಗದಿಂದ ಲೆಪಿಯೋಟೇಸಿಯೆ ಕುಟುಂಬಕ್ಕೆ ಸೇರಿದ ಶಿಲೀಂಧ್ರಗಳು ಬೆಳೆಯುತ್ತವೆ. ಇರುವೆಗಳು ಶಿಲೀಂಧ್ರಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ ಹಾಗೂ ಬೇರೆ ಜೀವಿಗಳ ದಾಳಿಯಿಂದ ಅವುಗಳನ್ನು ರಕ್ಷಿಸುತ್ತವೆ.
ತಾವು ತಂದ ಯಾವುದಾದರೂ ಎಲೆಯಲ್ಲಿ ಕಂಡು ಬರುವ ರಾಸಾಯನಿಕ ಸಂಯುಕ್ತವು ಶಿಲೀಂಧ್ರಕ್ಕೆ ಮಾರಕವಾದಲ್ಲಿ ಶಿಲೀಂಧ್ರದಿಂದ ಹೊರಡಲ್ಪಡುವ ಸಂದೇಶವನ್ನು ಗ್ರಹಿಸಿ ಆ ಎಲೆಯ ಪೂರೈಕೆಯನ್ನು ಸ್ಥಗಿತಗೊಳಿಸುತ್ತವೆ. ಈ ಮೂಲಕ ಜೀವ ಜಗತ್ತಿನಲ್ಲಿ ಉತ್ತಮ ಕೃಷಿಕನಾಗಿ ಈ ಇರುವೆ ಗುರುತಿಸಿಕೊಂಡಿದೆ.
ತಾವು ಬೆಳೆಸಿದ ಶಿಲೀಂಧ್ರಗಳನ್ನು ಇರುವೆಗಳ ಲಾರ್ವಗಳಿಗೆ ಪೋಷಕಾಂಶದ ಮೂಲವನ್ನಾಗಿ ಒದಗಿಸುತ್ತವೆ. ಇಲ್ಲಿ ಶಿಲೀಂಧ್ರಗಳ ಬೆಳವಣಿಗೆಗೆ ಇರುವೆಗಳ ಉಪಸ್ಥಿತಿ ಎಷ್ಟು ಮುಖ್ಯವೋ, ಇರುವೆಗಳ ಸಂತತಿಯ ಬೆಳವಣಿಗೆಯಲ್ಲಿ ಶಿಲೀಂಧ್ರಗಳ ಉಪಸ್ಥಿತಿ ಅಷ್ಟೇ ಮುಖ್ಯ.
ಹೀಗೆ ಎರಡು ಜೀವಿಗಳ ನಡುವಿನ ಸಂಬಂಧ ಮತ್ತಷ್ಟು ಬಿಗಿಗೊಳ್ಳುವುದೇ ಪರಸ್ಪರ ಅವಲಂಬನೆ ಎಂಬ ಸೇತುವೆಯ ಮೂಲಕ. ಸಹಜೀವನ ಎಂಬುದು ಪರಸ್ಪರ ನೀಡುವ ಸಹಕಾರವೇ ಆದರೂ ಕೆಲವು ಸಂದರ್ಭಗಳಲ್ಲಿ ಸಹಕಾರದ ಅನುಪಸ್ಥಿತಿಯೇ ಒಂದು ಜೀವಿಯ ವಿನಾಶಕ್ಕೆ ಕಾರಣವಾಗಬಹುದು.
ಇಂದು ನಿಸರ್ಗದಲ್ಲಿ ಮಾನವನ ಚಟುವಟಿಕೆಗಳು ಈ ಜೈವಿಕ ಪ್ರಕ್ರಿಯೆ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಿವೆ. ಪರಿಸರದಲ್ಲಿ ನಮ್ಮಂತೆಯೇ ಅನೇಕ ಜೀವಿಗಳು ಜೀವಿಸುತ್ತವೆ. ಅವುಗಳ ಜೀವ, ಪರಿಶ್ರಮಕ್ಕೆ ಬೆಲೆಕೊಟ್ಟು ಜೀವಿಸಲು ಬಿಡಬೇಕು. ನಮ್ಮಿಂದ ಉಪಕಾರವಾಗದಿದ್ದರೂ ಅಪಕಾರವನ್ನು ಮಾಡ ಬಾರದು.
ಸಹಜೀವನ ಎನ್ನುವ ಜೈವಿಕ ಪ್ರಕ್ರಿಯೆ ಎರಡು ಜೀವಿಗಳ ನಡುವೆ ಭೌತಿಕ ಹಾಗೂ ರಾಸಾಯನಿಕವಾಗಿ ನಡೆಯುವ ಸಂಭಾಷಣೆ. ಈ ಸಂಭಾಷಣೆಯಲ್ಲಿ ನಾವು ಸಹಕಾರವನ್ನು ಒದಗಿಸುವ ಪಾತ್ರವನ್ನು ವಹಿಸೋಣ. ಸಹಕಾರ ದೊಂದಿಗೆ ಸಹಜೀವನ ಎಂಬುದಕ್ಕೆ ಮೇಲೆ ತಿಳಿಸಿದ ಉದಾಹರಣೆಗಳೇ ಉತ್ತಮ ಮಾದರಿ.
-ಮಧುರಾ ಕಾಂಚೋಡು
ಜೆಎಸ್‌ಎಸ್ ಅಕಾಡೆಮಿ ಮೈಸೂರು